ಆರೋಗ್ಯವಾಗಿ ಇರೋದಕ್ಕೆ ನಮ್ಮನ್ನು ನಾವು ಫಿಟ್ ಆಗಿ ಇಡೋದಕ್ಕೆ ವ್ಯಾಯಾಮ ಮಾಡೋದು ತುಂಬಾನೇ ಮುಖ್ಯ. ವ್ಯಾಯಾಮ ಮಾಡೋದರಿಂದ ದೈಹಿಕ ಆರೋಗ್ಯವಲ್ಲದೆ ನಮ್ಮ ಮಾನಸಿಕ ಆರೋಗ್ಯ ಕೂಡ ಉತ್ತಮ. ಅದರಲ್ಲಿ ಗರ್ಭಿಣಿಯರು ಸುಮ್ಮನೆ ಕೂತುಕೊಳ್ಳುವ ಬದಲು ಕೆಲವೊಂದು ವ್ಯಾಯಾಮಗಳನ್ನು ನಿತ್ಯ ಮಾಡಬೇಕಾಗುತ್ತದೆ. ಇದರಿಂದ ಹೆರಿಗೆಯ ಸಂದರ್ಭದಲ್ಲಿ ತುಂಬಾನೇ ಒಳ್ಳೆಯದಾಗುತ್ತೆ.
ಅನೇಕ ಜನರಿಗೆ ಗರ್ಭಾವಸ್ಥೆಯ ಸಮಯದಲ್ಲಿ ವ್ಯಾಯಾಮ ಮಾಡೋದರಿಂದ ತಾಯಿ, ಮಗುವಿಗೆ ಸಮಸ್ಯೆಗಳಾಗುತ್ತೆ ಅನ್ನೋ ತಪ್ಪು ಕಲ್ಪನೆ ಇದೆ. ಆದರೆ ಈ ಕಲ್ಪನೆ ತಪ್ಪು. ಇನ್ ಫ್ಯಾಕ್ಟ್ ವೈದ್ಯರೇ ಗರ್ಭಾವಸ್ಥೆಯ ಸಂದರ್ಭದಲ್ಲಿ ವ್ಯಾಯಾಮ ಮಾಡುವಂತೆ ಸಲಹೆ ನೀಡುತ್ತಾರೆ. ಆದರೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವ್ಯಾಯಾಮ ಮಾಡಬೇಕು. ಅಷ್ಟಕ್ಕು ಗರ್ಭಾವಸ್ಥೆ ಸಂದರ್ಭದಲ್ಲಿ ವ್ಯಾಯಾಮ ಮಾಡುವಾಗ ಯಾವೆಲ್ಲಾ ತಪ್ಪುಗಳು ಆಗಬಾರದು ಅನ್ನೋದನ್ನು ತಿಳಿಯೋಣ.
ಗರ್ಭಾವಸ್ಥೆ ಸಂದರ್ಭದಲ್ಲಿ ಎಷ್ಟು ಹೊತ್ತು ವ್ಯಾಯಾಮ ಮಾಡಬೇಕು?
ತಜ್ಞರ ಪ್ರಕಾರ ಗರ್ಭಿಣಿ ಮಹಿಳೆಯರು ನಿತ್ಯ ವ್ಯಾಯಾಮ ಮಾಡಿದರೆ ಅವರ ಆರೋಗ್ಯಕ್ಕೆ ಉತ್ತಮ. ಇದರಿಂದ ತೂಕ ಹೆಚ್ಚಳವಾಗೋದನ್ನು ನಿಯಂತ್ರಿಸಬಹುದು. ಆದರೆ ದಿನಕ್ಕೆ 30 ನಿಮಿಷಕ್ಕಿಂತ ಹೆಚ್ಚು ಬಾರಿ ವ್ಯಾಯಾಮ ಮಾಡಬಾರದು.
ಅಂದರೆ ವಾರದಲ್ಲಿ ಒಟ್ಟು 150 ನಿಮಿಷ ವ್ಯಾಯಾಮ ಮಾಡಿದ್ರೆ ಅಷ್ಟೇ ಸಾಕು. ಇನ್ನೂ ಒಂದು ದಿನದಲ್ಲಿ 45 ನಿಮಿಷಕ್ಕಿಂತ ಹಚ್ಚು ಬಾರಿ ವ್ಯಾಯಾಮ ಮಾಡಬಾರದಂತೆ. ಇದರಿಂದ ಒವರ್ ಹೀಟ್ ಮತ್ತು ನಿರ್ಜಲೀಕರಣದ ಅಪಾಯ ಹೆಚ್ಚಾಗುತ್ತಂತೆ.
ಗರ್ಭಾವಸ್ಥೆ ಸಂದರ್ಭದಲ್ಲಿ ಯಾವ ರೀತಿಯ ವ್ಯಾಯಾಮ ಮಾಡಬೇಕು?
ಗರ್ಭಾವಸ್ಥೆ ಸಂದರ್ಭದಲ್ಲಿ ಎಲ್ಲಾ ವ್ಯಾಯಾಮಗಳನ್ನು ಮಾಡುವುದು ಸುರಕ್ಷಿತವಾಗಿರುವುದಿಲ್ಲ. ಗರ್ಭಿಣಿಯರು ಜಾಗಿಂಗ್ ಸೇರಿದಂತೆ ಏರೋಬಿಕ್ ವ್ಯಾಯಾಮಗಳನ್ನು ಮಾಡಬಹುದು. ಏಕೆಂದರೆ ಈ ವ್ಯಾಯಾಮಗಳು ಗರ್ಭಾವಸ್ಥೆ ಸಂದರ್ಭದಲ್ಲಿ ಸುರಕ್ಷಿತವಾಗಿದೆ. ನೀವು ಈ ವ್ಯಾಯಾಮಗಳನ್ನು ಮಾಡುವಾಗ ಮಾತನಾಡಲು ಸಾಧ್ಯವಾಗುವಂತೆ ಇರಬೇಕು. ಒಂದು ವೇಳೆ ಈ ವ್ಯಾಯಾಮಗಳನ್ನು ಮಾಡುವಾಗ ನಿಮಗೆ ಮಾತನಾಡಲು ಸಾಧ್ಯವಾಗದಿದ್ದರೆ ಆದಷ್ಟು ನಿಧಾನವಾಗಿ ಪ್ರಾರಂಭಿಸಿ.
ಸಾಧ್ಯವಾದಷ್ಟು ನಡೆಯಿರಿ:
ಗರ್ಭಾವಸ್ಥೆಯ ಸಂದರ್ಭದಲ್ಲಿ ಆರಾಮಾಗಿ ನಡೆಯಬಹುದು. ಆದಷ್ಟು ನಿಧಾನವಾಗಿ ನಡೆದರೆ ಒಳ್ಳೆಯದು. ಕೂತಲ್ಲೇ ಕೂತಿದ್ದರೆ ಮೈಯಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ. ಹೀಗಾಗಿ ಸಂಜೆ ಅಥವಾ ಬೆಳಗ್ಗಿನ ಸಮಯದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ನಡೆಯಿರಿ. ನಿಮಗೆ ಇನ್ನೊಂದು ಮಗುವಿದ್ದರೆ, ಅದರ ಶಾಲೆ ಹತ್ತಿರವಿದ್ದರೆ ಮಗುವನ್ನು ಶಾಲೆಗೆ ಬಿಟ್ಟು ಬನ್ನಿ.
ಸ್ಟೆಪ್ ಮೂಲಕ ನಡೆದುಕೊಂಡು ಹೋಗಿ:
ನೀವು ತಲುಪಬೇಕಾದ ಸ್ಥಳ ಹತ್ತಿರದಲ್ಲಿದ್ದರೆ ಲಿಫ್ಟ್ ಬಳಸುವ ಬದಲು ಮೆಟ್ಟಿಲನ್ನು ಬಳಸಿ ನಡೆದುಕೊಂಡು ಹೋಗಿ. ಇದರಿಂದ ನಿಮ್ಮ ಮಾಂಸಖಂಡ ಹಾಗೂ ಮೂಳೆಗಳಿಗೆ ವ್ಯಾಯಾಮ ಸಿಕ್ಕಂತಾಗುತ್ತದೆ. ನೀವು ಜಾಸ್ತಿ ನಡೆದಾಡದಿದ್ದರೆ ನಿಮ್ಮ ಮಾಂಸಖಂಡ ಹಾಗೂ ಮೂಳೆಗಳ ಆಕ್ಟೀವ್ ಆಗಿ ಇರೋದಿಲ್ಲ.
ಮನೆ ಕೆಲಸ ಮಾಡಿ:
ಗರ್ಭಿಣಿ ಎಂದು ಇಡೀ ದಿನ ಕೂತಿರೋದು ಅಥವಾ ಮಲಗಿರೋದು ಸರಿಯಲ್ಲ. ಇದರಿಂದ ಮೈಯೆಲ್ಲಾ ಜಡ ಹಿಡಿದಂತಾಗುತ್ತದೆ. ಹೆರಿಗೆಯ ಸಂದರ್ಭದಲ್ಲೂ ಕೂಡ ಕಷ್ಟ ಆಗುತ್ತದೆ. ಮನೆಯಲ್ಲಿ ಭಾರದ ವಸ್ತುಗಳನ್ನು ಎತ್ತೋದನ್ನು ಬಿಟ್ಟು ನಿಮ್ಮಿಂದ ಆಗುವ ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡಿ. ಅಡುಗೆ ಮಾಡಿ, ಚಿಕ್ಕ ಚಿಕ್ಕ ಪಾತ್ರೆ ತೊಳೆಯಿರಿ, ಪ್ರಾತ್ರೆ ಒರೆಸಿಡೋದನ್ನು ಮಾಡಬಹುದು.
ಗರ್ಭಾವಸ್ಥೆಯಲ್ಲಿ ಈ ಚಟುವಟಿಕೆಗಳನ್ನು ಮಾಡದಿರಿ!
ಗರ್ಭಾವಸ್ಥೆಯ ಸಂದರ್ಭದಲ್ಲಿ ಕೆಲವೊಂದು ಚಟುವಟಿಕೆಗಳನ್ನು ಮಾಡಲೇಬಾರದು. ಇದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ಅವುಗಳೆಂದರೆ ಸ್ಕೂಬಾ ಡೈವಿಂಗ್, ಕುದುರೆ ಸವಾರಿ, ಜಿಮ್ನಾಸ್ಟಿಕ್ಸ್, ಹಾಟ್ ಯೋಗ, ಹಾಟ್ ಫೈಲೆಟ್ಸ್ ಇತ್ಯಾದಿ. ಈ ಚಟುವಟಿಕೆಗಳನ್ನು ಮಾಡೋದ್ರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ಮಗುವಿನ ಭ್ರೂಣಕ್ಕೂ ಅಪಾಯ ಉಂಟಾಗಬಹುದು.
ವೈದ್ಯರ ಬಳಿಗೆ ಯಾವಾಗ ಹೋಗಬೇಕು?
ವ್ಯಾಯಾಮ ಮಾಡೋದ್ರಿಂದ ಗರ್ಭಿಣಿಯರು ಆರೋಗ್ಯವಾಗಿ ಇರುತ್ತಾರೆ. ಆದರೆ ಕೆಲವೊಂದು ಸಲ ನಿಮಗೆ ಮೊದಲ ಆರೋಗ್ಯ ಸಮಸ್ಯೆ ಇದ್ದು, ಅಂತಹ ಸಮಯದಲ್ಲಿ ವ್ಯಾಯಾಮ ಮಾಡುವ ರಿಸ್ಕ್ ತೆಗೆದುಕೊಳ್ಳೋದಕ್ಕೆ ಹೋಗಬೇಡಿ. ಒಂದು ವೇಳೆ ನೀವು ವ್ಯಾಯಾಮ ಮಾಡುವ ಸಂದರ್ಭದಲ್ಲಿ ಯೋನಿಯಲ್ಲಿ ರಕ್ತಸ್ರಾವ, ಉಸಿರಾಟದ ತೊಂದರೆಗಳು ಅಥವಾ ನೋವಿನ ಸಂಕೋಚನೆಗಳಂತಹ ಅನಭವಗಳಾದರೆ ತಕ್ಷಣವೇ ವ್ಯಾಯಾಮ ನಿಲ್ಲಿಸಿ ಮತ್ತು ನಿಮ್ಮ ವೈದ್ಯರನ್ನು ಸಂಪರ್ಕಿಸಿ.