ಮೊಳಕೆ ಬಂದ ತರಕಾರಿ ಹಾಗೂ ಕಪ್ಪಾದ ತರಕಾರಿ ಸೇವಿಸಬಹುದೇ.? ಇಲ್ಲಿದೆ ಮಾಹಿತಿ!

ತರಕಾರಿಗಳು ಬೇಸಿಗೆ ಕಾಲದಲ್ಲಿ ಫ್ರಿಡ್ಜ್ನಲ್ಲಿಟ್ಟರೆ ಸಹ ಬಹುಬೇಗ ಬಾಡಿಹೋಗುತ್ತವೆ ಇಲ್ಲವೆ ತಾಜಾತನ ಕಳೆದುಕೊಳ್ಳುತ್ತವೆ. ಆದರೆ ಇದಕ್ಕಿಂತ ವಿಚಿತ್ರ ಅಂದ್ರೆ ಬೇಸಿಗೆಯಲ್ಲಿ ತರಕಾರಿಗಳು ಬಹುಬೇಗ ಮೊಳಗೆ ಒಡೆಯುತ್ತವೆ. ನೀವು ಮಾರುಕಟ್ಟೆಯಿಂದ ತಂದಿರುವ ತರಕಾರಿಗಳು ಮನೆಯಲ್ಲಿಟ್ಟ ಒಂದೆರಡು ದಿನದಲ್ಲಿ ಮೊಳಕೆಯೊಡೆಯುತ್ತವೆ. ಅದರಲ್ಲು ಹೆಚ್ಚಾಗಿ ಆಲೂಗಡ್ಡೆ, ಈರುಳ್ಳಿ, ಬಟಾಣಿ ಸೇರಿ ಕೆಲವು ತರಕಾರಿಗಳು ಬಹುಬೇಗ ಮೊಳಕೆಯೊಡೆಯುತ್ತವೆ. 

ಮೊಳಕೆ ಬಂದಿರುವ ಆಲೂಗಡ್ಡೆ ತಿನ್ನಬಹುದು ಎನ್ನುವುದು ಒಳ್ಳೆಯ ಸುದ್ದಿ. ಆದರೆ ಇದು ಗಟ್ಟಿಯಾಗಿರುಬೇಕು, ನೆರಿಗೆ ಬಂದಿರಬಾರದು ಮತ್ತು ಕೊಳೆತಿರಬಾರದು. ಗಟ್ಟಿಯಾಗಿ, ಮೊಳಕೆ ಬಂದಿರುವಂತಹ ಆಲೂಗಡ್ಡೆಯಲ್ಲಿ ಕೆಲವೊಂದು ಪೋಷಕಾಂಶಗಳು ಇರುವುದು. ಆಲೂಗಡ್ಡೆಗೆ ಬಂದಿರುವಂತಹ ಮೊಳಕೆ ತೆಗೆದು, ಅದನ್ನು ಬಳಸಿಕೊಳ್ಳಬಹುದು. ನೀವು ಬೇರೆ ಖಾದ್ಯ ಮಾಡಬೇಕಾದ ಅಗತ್ಯವಿಲ್ಲ.

ಆಲೂಗಡ್ಡೆಗೆ ಮೊಳಕೆ ಬಂದಂತೆ ಅದು ತನ್ನಲ್ಲಿರುವ ಪಿಷ್ಠವನ್ನು ಸಕ್ಕರೆಯಾಗಿ ಪರಿವರ್ತನೆ ಮಾಡಿಕೊಂಡು ಹೊಸ ಗಿಡ ಬೆಳೆಯಲು ನೆರವಾಗುವುದು. ಈ ಪ್ರಕ್ರಿಯೆ ಆರಂಭದಲ್ಲಿ ನಿಮಗೆ ಕೆಲವೊಂದು ಮೆತ್ತಗಿನ ಕಲೆಗಳು ಕಂಡುಬರಬಹುದು. ಇದೇ ಜಾಗದಲ್ಲಿ ಬಳಿಕ ಮೊಳಕೆ ಬರುವುದು. ನೀವು ಮೊಳಕೆ ತೆಗೆದು ಆಲೂಗಡ್ಡೆ ಬಳಸಬಹುದು. ಆಲೂಗಡ್ಡೆ ಸ್ವಾಭಾವಿಕವಾಗಿ ಸೋಲನೈನ್ ಮತ್ತು ಚಾಕೋನಿನ್ ಎಂಬ ಎರಡು ರೀತಿಯ ವಿಷಗಳನ್ನು ಹೊಂದಿರುತ್ತದೆ, ಇದು ಮುಖ್ಯವಾಗಿ ಆಲೂಗಡ್ಡೆಯ ಮೊಳಕೆಗಳಲ್ಲಿ ಕಂಡುಬರುತ್ತದೆ. ಆಲೂಗೆಡ್ಡೆಯಲ್ಲಿ ಬಂದಿರುವ ಮೊಳಕೆಯಲ್ಲಿ ಹಸಿರು ಬಣ್ಣಕ್ಕೆ ತಿರುಗಿದ್ದರೆ ಅದು ಸೇವನೆಗೆ ಯೋಗ್ಯವಲ್ಲ. ಇನ್ನು ಆಲೂಗಡ್ಡೆ ಮೃದುವಾಗಿದ್ದರೆ ಅದರ ಮೇಲೆ ಕಪ್ಪು ಕಲೆಗಳು ಬಂದಿದ್ದರೆ ಅದು ಸೇವನೆಗೆ ಯೋಗ್ಯವಲ್ಲ.

ಈರುಳ್ಳಿ ಮೇಲೆ ಕಪ್ಪು ಕಲೆಗಳು:
ಈರುಳ್ಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕಪ್ಪು ಮಸಿಯನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ. ಈ ಕಪ್ಪು ಅಚ್ಚು ಮ್ಯೂಕೋರ್ಮೈಕೋಸಿಸ್ ಅಲ್ಲ. ಆದರೆ ಈ ಕಪ್ಪು ಅಚ್ಚು ಒಂದು ರೀತಿಯ ವಿಷವನ್ನು ಹೊರಸೂಸುತ್ತದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.

ಆಸ್ಪರ್ಜಿಲಸ್ ನೈಗರ್ ಅಪಾಯಕಾರಿಯೇ? 
ಈ ಕಪ್ಪು ಬಣ್ಣದ ಮಸಿಯು ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಇದು ಅಲರ್ಜಿಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಈಗಾಗಲೇ ಅಲರ್ಜಿ ಇರುವವರು ಈ ಕಪ್ಪು ಬಣ್ಣದ ಮಸಿ ಹೊಂದಿರುವ ಈರುಳ್ಳಿಯನ್ನು ಸೇವಿಸದಿರುವುದೇ ಉತ್ತಮ ಎಂದು ಹೇಳುತ್ತಾರೆ. ಅಸ್ತಮಾ ಇರುವವರು ಅದನ್ನು ಸೇವಿಸಿದಾಗ ಪರಿಣಾಮ ಬೀರಬಹುದು ಎಂದೂ ಹೇಳಲಾಗುತ್ತದೆ.

ಹೂಕೋಸು ಮೇಲೆ ಕಪ್ಪು ಕಲೆಗಳು:
ನೀವು ಖರೀದಿಸಿದ ಕೆಲವೇ ದಿನಗಳಲ್ಲಿ ಹೂಕೋಸು ಹಠಾತ್ತನೆ ಕಪ್ಪು ಕಲೆಗಳ ಹೊಂದಿದ್ದರೆ ಅದನ್ನು ಸೇವಿಸಬಹುದು, ಆದರೆ ಆಕ್ಸಿಡೀಕರಣದ ಕಾರಣದಿಂದಾಗಿ ಹೂಕೋಸು ಕಂದು ಬಣ್ಣದ ಚುಕ್ಕೆಗಳನ್ನು ಪಡೆಯಬಹುದು, ಇದು ಹೆಚ್ಚು ಕಾಲ ಬೆಳಕು ಮತ್ತು ಗಾಳಿಗೆ ಒಡ್ಡಿಕೊಳ್ಳುವುದರಿಂದ ರಾಸಾಯನಿಕ ಕ್ರಿಯೆಯಾಗಿದೆ. 

ಹೂಕೋಸುಗಳ ಮೇಲೆ ಕೆಲವು ಮಸುಕಾದ ಕಂದು ಬಣ್ಣದ ಚುಕ್ಕೆಗಳನ್ನು ನೋಡುವುದು ಬಹಳ ಸಾಮಾನ್ಯವಾಗಿದೆ. ಅದನ್ನು ನೀವು ಕತ್ತರಿಸಿ ಬದಗಿಟ್ಟು ಉಳಿದ ಭಾಗ ಅಡುಗೆಗೆ ಬಳಸಿಕೊಳ್ಳಬಹುದು. ಇದರಿಂದ ಯಾವ ಹಾನಿಯೂ ಇಲ್ಲ.

ವಾಸನೆ ಬೆಳ್ಳುಳ್ಳಿ:
ಬೆಳ್ಳುಳ್ಳಿಯು ಎಲ್ಲಾ ಅಡುಗೆ ಮನೆಯಲ್ಲು ಕಾಣಬಹುದು, ಆದರೆ ಹೆಚ್ಚು ದಿನ ಇಟ್ಟರೆ ಬೆಳ್ಳುಳ್ಳಿ ಬೇರೆ ರೀತಿ ವಾಸನೆ ಬರುತ್ತದೆ, ಜೊತೆಗೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ರೀತಿ ಆದಾಗ ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ನೋಡಬೇಕು ಅದು ಬಿಳಿಯ ಬಣ್ಣದಲ್ಲಿದ್ದರೆ ಮಾತ್ರ ಬಳಸಬಹುದು ಹಳದಿ ಬಣ್ಣಕ್ಕೆ ತಿರುಗಿದ್ದರೆ ಬಳಕೆ ಮಾಡಬಾರದು.