ಬಾಣಂತಿಯರ ಆಹಾರ ಕ್ರಮ ಹೀಗಿದ್ದರೆ ಬೇಗನೆ ಚೇತರಿಸಬಹುದು.

ಹೆರಿಗೆ ಎಂಬುವುದು ಹೆಣ್ಣಿಗೆ ಮರುಹುಟ್ಟು. ಒಂದು ಜೀವ ಅವಳಿಂದ ಬರುವಾಗ ಅವಳಿಗೂ ಅದು ಹೊಸ ಜನ್ಮ. ಹೆರಿಗೆಯ ಬಳಿಕ ದೇಹ ಮೊದಲಿನ ಸ್ಥಿತಿಗೆ ಬರಲು ಒಂದೆರಡು ತಿಂಗಳಾದರೂ ಬೇಕು. ಇನ್ನು ತಾಯಿ ತನ್ನ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯದ ಕಡೆಯೂ ಗಮನ ನೀಡಬೇಕು. 6 ತಿಂಗಳವರೆಗೆ ಮಗುವಿಗೆ ಎದೆಹಾಲು ಮಾತ್ರ ನೀಡುವುದರಿಂದ ಮಗುವಿಗೆ ಹಾಲು ಕಡಿಮೆಯಾಗದಿರಲು ಹಾಗೂ ತಮ್ಮ ದೇಹ ಬೇಗನೆ ಚೇತರಿಸಿಕೊಳ್ಳಲು ಪೌಷ್ಠಿಕಾಂಶ ಆಹಾರಗಳನ್ನು ಸೇವಿಸಬೇಕು.

ಬಾಣಂತಿ ಸೇವಿಸಬೇಕಾದ ಆಹಾರಗಳು:

ತರಕಾರಿಗಳು:
ಸೊಪ್ಪು, ದುಂಡು ಮೆಣಸು, ಬ್ರೊಕೋಲಿ, ಕ್ಯಾರೆಟ್, ಸಿಹಿ ಗೆಣಸು, ಟೊಮೆಟೊ, ಸೆಲರಿ, ಕ್ಯಾಬೇಜ್, ಬೀಟ್ರೂಡ್, ಹಾಗಲಕಾಯಿ, ಬಾಳೆಯ ಹೂ ಈ ಬಗೆಯ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇವಿಸಬೇಕು. 

ಹಣ್ಣುಗಳು:
ಸಿಟ್ರಸ್ ಅಂಶದ ಹಣ್ಣುಗಳನ್ನು ಸೇವಿಸಿ. ಬೆರ್ರಿ, ಮಾವಿನ ಹಣ್ಣು, ಕಲ್ಲಂಗಡಿ, ಬಾಳೆಹಣ್ಣು, ಸೇಬು, ದಾಳಿಂಬೆ ಈ ಬಗೆಯ ಹಣ್ಣುಗಳನ್ನು ಸೇವಿಸಿ. * ಧಾನ್ಯಗಳು: ಮೊಳಕೆ ಬರಿಸಿದ ಕಾಳುಗಳು, ನವಣೆ, ಕೆಂಪಕ್ಕಿ , ಗೋಧಿ, ಮೊಳಕೆ ಬರಿಸಿದ ಕಾಳುಗಳು ಇವುಗಳನ್ನು ಸೇವಿಸಿ. 

ತೆಳು ಮಾಂಸ ಹಾಗೂ ಪ್ರೊಟೀನ್ ಇರುವ ಆಹಾರಗಳು:
ಮೊಟ್ಟೆ, ಮೀನು, ಚಿಕನ್, ಟೋಫು ಇಂಥ ಆಹಾರಗಳನ್ನು ಸೇವಿಸಿ. 

ಕಡಿಮೆ ಕೊಬ್ಬಿನಂಶ ಇರುವ ಹಾಲಿನ ಉತ್ಪನ್ನಗಳು: 
ಮೊಸರು, ಹಾಲು, ಚೀಸ್ , ತುಪ್ಪ ಇಂಥ ಆಹಾರಗಳನ್ನು ಸೇರಿಸಿ.

ಬಾಣಂತಿಯ ಆಹಾರಕ್ರಮ ಹೇಗಿರಬೇಕು?

ಬ್ರೇಕ್ಫಾಸ್ಟ್: 
ಒಂದು ಕಪ್ ಹಾಲು ಹಾಕಿದ ಓಟ್ಸ್ ಸೇವಿಸಿ. ಇದರ ಜೊತೆಗೆ ಮತ್ತಷ್ಟು ವಿಟಮಿನ್ಗೆ ಒಂದು ಕಪ್ ಹಣ್ಣುಗಳನ್ನು ಸೇವಿಸಿ. 

ಲಂಚ್:
ಮೀನು/ಚಿಕನ್/ ಮೊಟ್ಟೆ ಇವುಗಳ ಜೊತೆಗೆ ತರಕಾರಿ ಪಲ್ಯ, ಸಾರು ಹಾಗೂ ಅನ್ನ ಅಥವಾ ಚಪಾತಿ ಸೇವಿಸಿ. ವಿಟಮಿನ್ ಸಿ ಇರುವ ಸೂಪ್ ಸೇವಿಸಿ. ಟೊಮೆಟೊ ಸೂಪ್, ಚಿಕನ್ ಸೂಪ್ ಮುಂತಾದ ಸೂಪ್ ಒಳ್ಳೆಯದು.

ಡಿನ್ನರ್:
ಸ್ವಲ್ಪ ಕೆಂಪಕ್ಕಿ ಅನ್ನ, ಒಂದು ಚಮಚ ತುಪ್ಪ, ಮೀನು ಅಥವಾ ಚಿಕನ್ ಜೊತೆಗೆ ಸ್ವಲ್ಪ ತರಕಾರಿ ನಿಮ್ಮ ಡಿನ್ನರ್ನಲ್ಲಿರಲಿ.

ಸ್ನಾಕ್ಸ್: 
ಇದರ ಮಧ್ಯ-ಮಧ್ಯ ಡ್ರೈಫ್ರೂಟ್ಸ್ ಸವಿಯಿರಿ. ಜೊತೆಗೆ ತಾಜಾ ಜ್ಯೂಸ್ ಅಥವಾ ಸ್ಮೂತಿ ತಯಾರಿಸಿ ಕುಡಿಯಬಹುದು. 

ಸಾಕಷ್ಟು ನೀರು ಕುಡಿಯಿರಿ: 
ಬಾಣಂತಿಯರು ಕಡಿಮೆಯೆಂದರೂ 3 ಲೀಟರ್ ನೀರು ಕುಡಿಯಬೇಕು. ಬಿಸಿ-ಬಿಸಿಯಾದ ನೀರು ಕುಡಿಯಿರಿ.

ವಿಟಮಿನ್ಸ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕೇ? 
ಈ ಕುರಿತು ನಿಮ್ಮ ವೈದ್ಯರ ಬಳಿ ವಿಚಾರಿಸಿ, ಅವರು ಸೂಚಿಸಿದ ಸಪ್ಲಿಮೆಂಟ್ಸ್ ಅವರು ಹೇಳಿರುವ ಪ್ರಮಾಣದಲ್ಲಿ ಸೇವಿಸಿ. ವಿಟಮಿನ್ಸ್ಗಳ ಕೊರತೆಯಾಗದಂತೆ ಆಹಾರಕ್ರಮ ಪಾಲಿಸಿದರೆ ಸಪ್ಲಿಮೆಂಟ್ಸ್ ಬೇಕಾಗಿಲ್ಲ. ತುಂಬಾ ವೀಕ್ ಇರುವವರು ಕ್ಯಾಲ್ಸಿಯಂ ಹಾಗೂ ಐರನ್ (ಕಬ್ಬಿಣದಂಶ) ಸಪ್ಲಿಮೆಂಟ್ಸ್ ತೆಗೆದುಕೊಳ್ಳಬೇಕು. ಈ ಪೋಷಕಾಂಶಗಳು ನಿಮ್ಮ ದೇಹಕ್ಕೆ ಅವಶ್ಯಕವಾಗಿದೆ. 

ಪ್ರೋಟಿನ್ಸ್: 
ಬೀನ್ಸ್, ಸಮುದ್ರಾಹಾರ, ತೆಳು ಮಾಂಸ, ಮೊಟ್ಟೆ, ಸೋಯಾ ಉತ್ಪನ್ನಗಳು. ದಿನದಲ್ಲಿ ಸ್ವಲ್ಪ-ಸ್ವಲ್ಪವಾಗಿ 5-7 ಬಾರಿ ಪ್ರೊಟೀನ್ ಇರುವ ಆಹಾರಗಳನ್ನು ಸೇವಿಸಿ. ಕ್ಯಾಲ್ಸಿಯಂ: ಬಾಣಂತಿಯರಿಗೆ ಒಂದು ದಿನಕ್ಕೆ 1,000 ಮಿ.ಗ್ರಾಂ ಅವಶ್ಯಕವಾಗಿದೆ. ದಿನದಲ್ಲಿ 3 ಬಾರಿ ಸೇವಿಸಿ. ಕಬ್ಬಿಣದಂಶ: ಪ್ರತಿ ದಿನ 9ಮಿಗ್ರಾಂ ಕಬ್ಬಿಣದಂಶ ಅವಶ್ಯಕವಾಗಿದೆ.

ಬಾಣಂತಿಯರಿಗೆ ಎಷ್ಟು ಕ್ಯಾಲೋರಿ ಅವಶ್ಯಕ?
ಮಗುವಾದ ಬಳಿಕ ತಾಯಿಗೆ ದಿನದಲ್ಲಿ 1800 ರಿಂದ 2,200 ಕ್ಯಾಲೋರಿಯ ಆಹಾರಸೇವಿಸಬೇಕು. ನೀವು ಕಡಿಮೆ ತೂಕವನ್ನು ಹೊಂದಿದ್ದರೆ ಅಥವಾ ವರ್ಕ್ಔಟ್ ಮಾಡುವವರಾದರೆ ಇನ್ನೂ 500 ಕ್ಯಾಲೋರಿ ಅಧಿಕ ಸೇವಿಸಬೇಕು.

ಬಾಣಂತಿಯರು ಡಯಟ್ ಮಾಡಬಹುದೇ?
ಕೆಲವರು ಮೈ ತೂಕ ಹೆಚ್ಚಾಗುತ್ತದೆ ಎಂದು ಡಯಟ್ ಮಾಡಲು ಮುಂದಾಗುತ್ತಾರೆ. ಆದರೆ ಈ ಸಮಯದಲ್ಲಿ ನೀವು ಪೌಷ್ಠಿಕಾಂಶದ ಆಹಾರದ ಕಡೆ ಗಮನ ಕೊಡಬೇಕೇ ಹೊರತು ಡಯಟ್ ಕಡೆ ಗಮನ ನೀಡಬಾರದು. ನೀವು ಕಡಿಮೆ ಆಹಾರ ಸೇವನೆ ಮಾಡಿದರೆ ಅದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದಲ್ಲ, ಮಗುವಿಗೆ ಹಾಲು ಕಡಿಮೆಯಾಗಿ ಪೌಷ್ಠಿಕಾಂಶದ ಕೊರತೆ ಉಂಟಾಗುವುದು. ಆದ್ದರಿಂದ ಬಾಣಂತಿಯಾಗಿದ್ದಾಗ ಪೌಷ್ಠಿಕಾಂಶದ ಆಹಾರ ಸೇವಿಸಿ, ವರ್ಕೌಟ್ ಮಾಡಿ.. ಮೈ ತೂಕ ಹೆಚ್ಚಾಗುವುದಿಲ್ಲ, ದೇಹವೂ ಬೇಗನೆ ಚೇತರಿಸಿಕೊಳ್ಳುವುದು. ವರ್ಕೌಟ್ ಕೂಡ ಮೊದಲಿಗೆ ಸರಳವಾದ ವ್ಯಾಯಾಮ ಮಾಡಿ, ನಂತರ 6 ತಿಂಗಳ ಬಳಿಕ ಹೊಟ್ಟೆ ಕರಗಿಸುವ ವ್ಯಾಯಾಮದತ್ತ ಗಮನ ನೀಡಿ.