ತುಂಬಾ ಸರಳವಾಗಿ ಮನೆಯಲ್ಲಿಯೇ 5-6 ಜನರಿಗೆ ರಾಗಿ ಮುದ್ದೆ ಮಾಡುವ ವಿಧಾನ

ರಾಗಿ ಮುದ್ದೆ ಸೇವಿಸಿದರೆ ದೇಹಕ್ಕೆ ಶಕ್ತಿ ಹಾಗೂ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಜೊತೆಗೆ ಅರ್ಧ ಗಂಟೆ ವ್ಯಾಯಾಮ ಸಾಕು ಮಧುಮೇಹದ ಅಪಾಯ ತಡೆಗಟ್ಟಬಹುದು. ರಾಗಿ ಮುದ್ದೆ ತಿಂದ್ರೆ ಬೇಗನೆ ಹಸಿವು ಕೂಡ ಉಂಟಾಗುವುದಿಲ್ಲ. ದಿನದಲ್ಲಿ ಒಂದು ಹೊತ್ತಾದರೂ ರಾಗಿ ಮುದ್ದೆ ಸೇರಿಸಿದರೆ ತುಂಬಾನೇ ಒಳ್ಳೆಯದು.

ಬಸ್ಸಾರು ಇರಲಿ, ಮಟನ್, ಚಿಕನ್ ಸಾರು ಇರಲಿ ಎಲ್ಲದಕ್ಕೂ ಸೈ ಈ ರಾಗಿ ಮುದ್ದೆ. ಈ ರಾಗಿ ಮುದ್ದೆಯನ್ನು ಅನ್ನ ಹಾಕಿ ಕೆಲವರು ಮಾಡಿದರೆ ಬರೀ ರಾಗಿ ಹಿಟ್ಟು ಹಾಕಿ ತಯಾರಿಸುತ್ತಾರೆ, ಬನ್ನಿ ಈ ಎರಡೂ ವಿಧಾನ ನೋಡೋಣ.

* 2 ಕಪ್ ನೀರು ಹಾಕಿ ಕುದಿಸಿನೀರು ಕುದಿ ಬರುವಾಗ ಸ್ವಲ್ಪ ಉಪ್ಪು ಮತ್ತು ತುಪ್ಪ ಹಾಕಿ.

* ನೀರು ಕುದಿ ಬರುವಾಗ 1 ಕಪ್ ರಾಗಿ ಹಿಟ್ಟನ್ನು ಮೆಲ್ಲನೆ ಸುರಿಯಿರಿ, ಹೀಗೆ ಸುರಿಯುವಾಗ ಗಂಟು ಕಟ್ಟದಿರಲು ಸೌಟ್ನಿಂದ ಆಡಿಸುತ್ತಲೇ ಇರಿ, ನಂತರ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ, ಬಳಿಕ ಉರಿಯಿಂದ ಇಳಿಸಿ.

* ಈಗ ಒಂದು ಕಪ್ನಲ್ಲಿ ನೀರು ಇಟ್ಟುಕೊಳ್ಳಿ, ಎರಡು ತಟ್ಟೆ ಇಡಿ, ಒಂದು ಸ್ವಲ್ಪ ದೊಡ್ಡ ತಟ್ಟೆ ಆಗಿರಲಿ, ಈಗ ತಟ್ಟೆಗೆ ತುಪ್ಪ ಸವರಿ, ಬೇಯಿಸಿದ ರಾಗಿ ಹಿಟ್ಟು ಹಾಕಿ, ಕೈಯನ್ನು ನೀರಿನಲ್ಲಿ ಮೆಲ್ಲನೆ ಅದ್ದಿ ಉಂಡೆ ರೀತಿಯಲ್ಲಿ ಮತ್ತೊಂದು ತಟ್ಟೆಗೆ ಹಾಕಿ.

ಅನ್ನ ಹಾಕಿ ಮಾಡುವ ರಾಗಿ ಮುದ್ದೆ:

ಇನ್ನು ಕೆಲವರು ಅನ್ನ ಹಾಕಿ ರಾಗಿ ಮುದ್ದೆ ಮಾಡುತ್ತಾರೆ. ಕೆಲವರು ಹಿಟ್ಟು ರೆಡಿ ಮಾಡಿ ಅನ್ನ ಸೇರಿಸಿದರೆ ಕುದಿಯುತ್ತಿರುವ ನೀರಿಗೆ ಅನ್ನ ಹಾಕಿ, ನಂತರ ರಾಗಿ ಹಿಟ್ಟು ಸೇರಿಸಿ ಮಿಕ್ಸ್ ಮಾಡುತ್ತಾರೆ, ಮಧುಮೇಹಿಗಳಿಗೆ ಅನ್ನ ಸೇರಿಸಿ ಮುದ್ದೆ ಮಾಡಬೇಡಿ.

ನಾವಿಲ್ಲ ತುಂಬಾ ಸರಳವಾಗಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ. ಮನೆಯಲ್ಲಿ 5-6 ಜನರಿಗಾದರೆ ಈ ರೀತಿ ಮುದ್ದೆ ರೆಡಿ ಮಾಡಬಹುದು, ಹೆಚ್ಚಿನ ಪರಿಶ್ರಮ ಆಗಲ್ಲ, ಅರ್ಧ ಗಂಟೆಗೆ ಮುದ್ದೆ ರೆಡಿಯಾಗಿರುತ್ತದೆ. ಇದನ್ನು ನಿಮಗಿಷ್ಟವಾದ ಸಾರು ಜೊತೆಗೆ ಆಂದವಾಗಿ ಸವಿಯಿರಿ.ಯಾವಾಗಲೂ ಮುದ್ದೆ ಕಟ್ಟುವಾಗ ತುಪ್ಪ ಸೇರಿಸಿ ರುಚಿ ಸೂಪರ್ ಅನಿಸುವುದು.

ರಾಗಿ ಮುದ್ದೆ ಗಂಟು ಗಂಟಾಗಿ ಇರಬಾರದು:

ಹೌದು ಮುದ್ದೆ ಗಂಟ ಗಂಟಾಗಿ ಇರಲೇಬಾರದು, ಹಾಗಾಗಿ ನೀವು ರಾಗಿ ಇಟ್ಟು ಹಾಕುವಾಗ ಈ ಬಗ್ಗೆ ಜಾಗ್ರತೆವಹಿಸಿ. ನಿಮಗೆ ಕುದಿಯುವ ನೀರಿಗೆ ರಾಗಿ ಹಿಟ್ಟು ಹಾಕುವಾಗ ಗಂಟು ಕಟ್ಟುವ ಭಯ ಇದ್ದರೆ ನೀವು 2 ಕಪ್ ನೀರಿಗೆ 1 ಕಪ್ ರಾಗಿ ಇಟ್ಟು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕುದಿಸಿ ಇಟ್ಟು ತಯಾರಿಸಬಹುದು.

ಇನ್ನು ನೀವು ನೀರಿಗೆ ಉಪ್ಪು, ರಾಗಿ ಮಾತ್ರ ಹಾಕಿ ರಾಗಿ ಮುದ್ದೆ ಮಾಡುವುದಕ್ಕಿಂತ ತುಪ್ಪ ಸೇರಿಸಿ ತುಂಬಾ ರುಚಿಯಾಗಿರುತ್ತೆ, ಮುದ್ದೆ ಮೃದುವಾಗಿರುತ್ತದೆ. ರಾಗಿ ಎಷ್ಟು ಬಳಸುತ್ತೀರೋ ಅದರ ಎರಡು ಪಟ್ಟು ಅಂದರೆ 1 ಗ್ಲಾಸ್ಗೆ 2 ಗ್ಲಾಸ್ ನೀರು ಹಾಕಿದರೆ ಹದ ಸರಿಯಾಗಿರುತ್ತದೆ. ಇನ್ನು ರಾಗಿ ಮುದ್ದೆ ರುಚಿ ಅನಿಸುವುದು ಅದಕ್ಕೆ ಸೂಕ್ತವಾದ ಸಾರು ಇರಬೇಕು.