ಬಂಜೆತನದ ಸಮಸ್ಯೆ ಇರುವವರು ಎಷ್ಟೊ ದಂಪತಿಗಳಿದ್ದಾರೆ. ಅವರಿಗೆ ನಮಗೊಂದು ಮಗು ಬೇಕೆಂಬ ದೊಡ್ಡ ಕನಸಿರುತ್ತದೆ, ಆದರೆ ಯಾವುದೋ ಕಾರಣದಿಂದ ಮಗು ಆಗಿರಲ್ಲ. ಆದರೆ ಮಗು ಇಲ್ಲ ಎಂಬ ನೋವಿಗಿಂತ ಜನರ ಕೊಂಡು ಮಾತು ಅವರನ್ನು ನೋಯಿಸುತ್ತದೆ.
ಹಾಗಾಗಿ ಮಕ್ಕಳಿಲ್ಲದ ದಂಪತಿ ಬಳಿ ಯಾವ ಬಗೆಯ ಪ್ರಶ್ನೆ ಕೇಳಬಾರದು ಎಂದು ಹೇಳಿದ್ದೆವು, ಮಕ್ಕಳಿಲ್ಲದ ದಂಪತಿಯ ಬಳಿ ಹೇಗೆ ವರ್ತಿಸಬೇಕು, ಅವರಿಗೆ ನಮ್ಮಿಂದ ನೋವುಂಟಾಗದಿರಲು ಹೇಗೆ ಜಾಗ್ರತೆ ವಹಿಸಬೇಕು ಎಂದು ನೋಡೋಣ ಬನ್ನಿ:
ಅವರ ಮಾತುಗಳನ್ನು ಕೇಳಿ:
ಅವರು ಮಕ್ಕಳಿಲ್ಲ ನೋವು ಹಂಚಿಕೊಂಡಾಗ ನೀವು ಅವರ ಮಾತುಗಳನ್ನು ಕೇಳಬೇಕು, ನಂತರ ಅವರಿಗೆ ಒಳ್ಳೆಯ ವಿಚಾರವಷ್ಟೇ ಚಿಂತಿಸು ಎಂದು ಹೇಳಿ, ಅವರನ್ನು ಕಂಫರ್ಟ್ ಮಾಡಿ. ಅವರು ಯಾವುದಾದರು ಶುಭ ಕಾರ್ಯಕ್ಕೆ ಬರುವಾಗ ನೀವು ಇತರರನ್ನು ನೋಡಿಕೊಳ್ಳುವಂತೆ ಅವರನ್ನೂ ನೋಡಿಕೊಳ್ಳಬೇಕು, ಅಲ್ಲದೆ ಮನೆಯಲ್ಲಿ ಹಿರಿಯರಿಗೆ ಮಕ್ಕಳಿಲ್ಲದ ಕಾರಣಕ್ಕೆ ಅವರನ್ನು ಕೊಂಡು ನುಡಿಯಬಾರದು ಎಂದು ಮೊದಲೇ ಎಚ್ಚರಿಸಿ. ಈ ರೀತಿ ಮಾಡಿದರೆ ಅವರ ನಮ್ಮ ಮನೆಗೆ ಬಂದಾಗ ಅವರಿಗೆ ನೋವಾಗದಂತೆ ನೋಡಿಕೊಳ್ಳಬಹುದು.
ಅವರಿಗೆ ಈಗ ಇರುವ ಮೆಡಿಕಲ್ ಸೌಲಭ್ಯ ಬಗ್ಗೆ ತಿಳಿಸಿ:
ಕೆಲವೊಮ್ಮೆ ಮುಜುಗರದಿಂದಾಗಿ ಎಷ್ಟೋ ದಂಪತಿ ತಮ್ಮ ಸಮಸ್ಯೆಯೇನೂ ಎಂದು ತಿಳಿದುಕೊಳ್ಳಲು ವೈದ್ಯರ ಬಳಿಗೆ ಹೋಗುವುದೇ ಇಲ್ಲ, ಅಂಥವರಿಗೆ ಸೂಕ್ತ ತಜ್ಞರನ್ನು ಭೇಟಿಯಾಗುವಂತೆ ಪ್ರೋತ್ಸಾಯಿಸಿ. ಏನೂ ಯೋಚಿಸಬೇಡ, ಮೊದಲು ವೈದ್ಯರ ಸಲಹೆ ಪಡೆಯಿರಿ ಎಂದು ಹೇಳಿ. ಸಾಕಷ್ಟು ದಂಪತಿಗೆ ಮೆಡಿಕಲ್ ಸೌಲಭ್ಯ ಬಗ್ಗೆ ಗೊತ್ತಿರುವುದಿಲ್ಲ, ನಿಮಗೆ ಗೊತ್ತಿದ್ದರೆ ಅದರ ಬಗ್ಗೆ ಮಾಹಿತಿ ನೀಡಿ.
ಅವರಿಗೆ ಅವಶ್ಯವಿದೆ ಎಂದು ನಿಮಗನಿಸಿದರೆ ಕೌನ್ಸಿಲಿಂಗ್ ಕೊಡಿಸಿ:
ಕೆಲವರು ಮಗುವಿಲ್ಲ ಎಂದು ತುಂಬಾನೇ ಕುಗ್ಗಿ ಹೋಗುತ್ತಾರೆ, ಅಂಥವರಿಗೆ ಸೂಕ್ತ ಕೌನ್ಸಿಲಿಂಗ್ ಅವಶ್ಯಕವಿರುತ್ತದೆ. ಕೌನ್ಸಿಂಗ್ ತೆಗೆದುಕೊಳ್ಳಲು ಸಲಹೆ ನೀಡಿ, ನೀವೇ ಅವರನ್ನು ಕರೆದುಕೊಂಡು ಹೋಗಿ, ಕೌನ್ಸಿಲಿಂಗ್ ಸಿಕ್ಕಿದಾಗ ಅವರ ಮನಸ್ಸಿನ ನೋವು ತುಂಬಾನೇ ಕಡಿಮೆಯಾಗುವುದು. ಅವರಿಗೆ ನೀವು ಕೊಡುವ ಆತ್ಮವಿಶ್ವಾಸ ತುಂಬಾನೇ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಕುಗ್ಗಿ ಹೋಗಲು ಬಿಡಬೇಡಿ.
ನಿಮ್ಮ ಮಕ್ಕಳನ್ನು ಅವರ ಜೊತೆ ಆಟ ಆಡಲು ಬಿಡಿ:
ಮಕ್ಕಳ ಜೊತೆ ಆಟವಾಡಿದಾಗ ಅವರ ಮನಸ್ಸಿಗೆ ಖುಷಿಯಾಗುತ್ತದೆ, ರಿಲ್ಯಾಕ್ಸ್ ಆಗುತ್ತಾರೆ, ತಮ್ಮ ನೋವು ಮರೆಯಲು ಪ್ರಯತ್ನಿಸುತ್ತಾರೆ. ಅವರು ನಿಮ್ಮ ಮಕ್ಕಳಲ್ಲಿ ತಮ್ಮ ಮಕ್ಕಳನ್ನು ಕಾಣಲು ಪ್ರಯತ್ನಿಸುತ್ತಾರೆ.
ಬಂಜೆತನ ಶಾಪವೆಂದು ಪರಿಗಣಿಸಬೇಡಿ:
ಮಗುವಾಗದಿದ್ದರೆ ಅವರನ್ನು ನೋಡುವ ಮನಸ್ಥಿತಿಯನ್ನು ಈ ಸಮಾಜ ಬದಲಾಯಿಸಿಕೊಳ್ಳಬೇಕು, ಮಗುವಾಗದೆ ಇದ್ದರೆ ಅವರಿಗೆ ತಾಯಿ ಹೃದಯ ಇಲ್ಲ ಎಂದಲ್ಲ, ಅವರ ಮನಸ್ಸಿನಲ್ಲಿಯೂ ತಾಯಿಯ ಪ್ರೀತಿ ಇರುತ್ತದೆ, ತಂದೆಯ ಅಕ್ಕರೆ ಇರುತ್ತದೆ ಹಾಗಾಗಿ ಅವರಿಗೆ ಮಗುವಿನ ಬಗ್ಗೆ ಹೇಳಿ ನೋವು ಕೊಡುವ ಬದಲಿಗೆ ನಿಮ್ಮ ಸಂತೋಷದಲ್ಲಿ ಅವರನ್ನು ಭಾಗಿಯಾಗಿಸಿ.
ಮಕ್ಕಳಿಲ್ಲದ ದಂಪತಿ ಕೂಡ ತುಂಬಾ ಮನಸ್ಸಿಗೆ ತೆಗೆದುಕೊಳ್ಳುವುದನ್ನು ಬಿಡಬೇಕು:
ಹೆತ್ತ ಮಾತ್ರಕ್ಕೆ ತಂದೆ -ತಾಯಿ ಆಗಲ್ಲ, ಮಗ ಅಥವಾ ಮಗಳು ಇದ್ದ ತಕ್ಷಣ ಒಳ್ಳೆಯ ಮಕ್ಕಳು ಆಗಲ್ಲ... ನೀವು ನಿಮ್ಮ ಮಗುವಾಗಿ ಯೋಚಿಸುವ , ನಿಮ್ಮನ್ನು ತುಂಬಾ ಪ್ರೀತಿಸುವ ಮಕ್ಕಳು ನಿಮ್ಮ ಸುತ್ತ ಮುತ್ತ ಇರುತ್ತಾರೆ. ಇನ್ನು ಹೆತ್ತ ಎಲ್ಲಾ ಮಕ್ಕಳು ಅಪ್ಪ-ಅಮ್ಮನ ತುಂಬಾ ಚೆನ್ನಾಗಿ ನೋಡಿಕೊಳ್ಳುವುದಾದರೆ ವೃದ್ಧಾಶ್ರಮವೇ ಇರುತ್ತಿರಲಿಲ್ಲ, ಆಗಾಗಿ ಗಂಡ-ಹೆಂಡತಿ ಅನ್ಯೂನ್ಯದಿಂದ ಬಾಳುವತ್ತ ಗಮನಹರಿಸಿ. ಅನಗ್ಯತ ಚಿಂತೆ ಮಾಡಿ ನಿಮ್ಮ ಜೀವನ ನೋವಿನಲ್ಲಿಯೇ ಕಳೆಯಬೇಡಿ.