ಮಲಗಿದ್ದಾಗ ಮನುಷ್ಯನಿಗೆ ಕನಸು ಬೀಳೋದು ಸಹಜ. ಒಳ್ಳೆಯ ಕನಸು ಬಿದ್ದಾಗ ತುಂಬಾನೇ ಖುಷಿ ಪಡುತ್ತೇವೆ. ಅದೇ ರೀತಿ ಕೆಟ್ಟ ಕನಸು ಬಿದ್ದಾಗ ಮನಸ್ಸಿಗೆ ಒಂದು ರೀತಿ ನೋವುಂಟಾಗುತ್ತದೆ. ಹೀಗೆ ಗರ್ಭಿಣಿಯರಿಗೂ ಕೂಡ ಸಾಮಾನ್ಯವಾಗಿ ಕನಸುಗಳು ಬೀಳುತ್ತಿರುತ್ತದೆ.
ಕೆಲವೊಂದು ಸಾರಿ ವಿಚಿತ್ರ ಕನಸುಗಳು ಬೀಳುತ್ತದೆ. ಇದರಿಂದ ನಮಗೆ ಇನ್ನಿಲ್ಲದ ಭಯ ಕಾಡೋದಕ್ಕೆ ಶುರುವಾಗುತ್ತದೆ. ಅಷ್ಟಕ್ಕು ಗರ್ಭಿಣಿಯಾಗಿದ್ದಾಗ ಹೆಚ್ಚು ಹೆಚ್ಚು ಕನಸುಗಳು ಬೀಳೋದು ಯಾಕೆ? ಯಾವ ಕನಸು ಬಿದ್ರೆ ಏನು ಅರ್ಥ ಅನ್ನೋದನ್ನು ತಿಳಿಯೋಣ.
ಗರ್ಭಿಣಿಯರಿಗೆ ಅತೀ ಹೆಚ್ಚು ಕನಸುಗಳು ಬೀಳೋದ್ಯಾಕೆ?
ಸಾಮಾನ್ಯ ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಗರ್ಭಿಣಿಯರಿಗೆ ಅತೀ ಹೆಚ್ಚು ಕನಸು ಬೀಳುತ್ತದೆ. ಸಾಮನ್ಯವಾಗಿ 8 ಗಂಟೆಗಳ ನಿದ್ರೆಯ ಚಕ್ರದಲ್ಲಿ ಸಾಮಾನ್ಯ ಜನರಿಗೆ ಬೀಳೋದಕ್ಕಿಂತ ಹೆಚ್ಚು ಕನಸುಗಳು ಗರ್ಭಿಣಿಯರಿಗೆ ಬೀಳುತ್ತಂತೆ.
ಇದೇ ಕಾರಣ ಅವರು ಅತೀ ಹೆಚ್ಚು ಹೊತ್ತು ಮಲಗುವುದು ಕೂಡ ಒಂದು ಕಾರಣ ಇರಬಹುದು. ಗರ್ಭಾವಸ್ಥೆಯ ಸಮಯದಲ್ಲಿ ಆಗುವ ಸುಸ್ತು ಹಾಗೂ ಶಕ್ತಿ ನಷ್ಟದಿಂದ ಕೂಡ ಈ ರೀತಿ ಕನಸುಗಳು ಬೀಳುವ ಸಾಧ್ಯತೆಯಿದೆ. ನೀವು ಹೆಚ್ಚು ನಿದ್ರೆ ಮಾಡಿದರೆ ನೀವು ಕನಸು ಕಾಣುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಕೂಡ ಚಿಂತೆ ಮಾಡುವ ಅಗತ್ಯವಿಲ್ಲ.
ಕನಸುಗಳು ನಿಜವೆಂದು ಭಾಸವಾಗುತ್ತೆ!:
ಗರ್ಭಿಣಿಯರಿಗೆ ಕೆಲವೊಂದು ಸಾರಿ ಬೀಳುವ ಕನಸುಗಳು ನಿಜಾನಾ? ಅಥವಾ ಸುಳ್ಳಾ? ಎಂದು ಗುರುತಿಸುವುದು ಕಷ್ಟ. ಗಾಢ ನಿದ್ರೆಯಲ್ಲಿ ಕನಸು ಬೀಳೋದ್ರಿಂದ ಇಲ್ಲಿ ನಡೆಯುವ ಘಟನೆಗಳು ಕಣ್ಣಿಗೆ ಕಟ್ಟಿದಂತಿರುತ್ತದೆ. ಅದರಿಂದ ಹೊರ ಬರೋದಕ್ಕೂ ನಮ್ಮಿಂದ ಸಾಧ್ಯವಾಗದೇ ಒದ್ದಾಡುತ್ತೇವೆ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಈ ಕನಸಿನಿಂದ ಹೊರ ಬರೋದಕ್ಕೆ ಸಾಧ್ಯವಾಗೋದಿಲ್ಲ. ಕೊನೆಗೆ ಒಮ್ಮೆಲೆ ಎದ್ದು ಕುಳಿತುಕೊಳ್ಳುತ್ತೇವೆ. ಆ ನಂತರ ಕೂಡ ಕನಸು ನಿಜಾನಾ? ಅಥವಾ ಸುಳ್ಳಾ ಎಂದು ಗುರುತಿಸೋದಕ್ಕೆ ಕೊಂಚ ಹೊತ್ತು ಒದ್ದಾಡುತ್ತೇವೆ. ನೀವು ಎಚ್ಚರವಾದಾಗ ಕನಸು ಮತ್ತು ವಾಸ್ತವದ ನಡುವೆ ವಿವೇಚನೆ ಮಾಡಲು ನಿಮಗೆ ಸ್ವಲ್ಪ ಸಮಯ ಬೇಕಾಗಬಹುದು. ಗರ್ಭಾವಸ್ಥೆಇಲ್ಲಿ ಈ ರೀತಿ ಆಗೋದು ಸಾಮಾನ್ಯ.
ಪ್ರತಿಯೊಬ್ಬ ಹೆಣ್ಣಿಗೂ ತಾಯಿಯಾಗೋದು ಒಂದು ರೀತಿ ಸ್ಪೆಷಲ್ ಅನುಭವ ಅಂತಾನೇ ಹೇಳಬಹುದು. ಆಕೆ ತನ್ನ ಮಗುವಿನ ಬಗ್ಗೆ ನೂರಾರು ಕನಸುಗಳನ್ನು ಹೊತ್ತುಕೊಂಡು ಇರುತ್ತಾಳೆ. ಆಕೆ ಗರ್ಭಿಣಿಯಾಗಿರುವಾಗಲೂ ಕೂಡ ಆಕೆಗೆ ನೂರಾರು ಕನಸುಗಳು ಬೀಳುತ್ತದೆ. ಮಗು ಹುಟ್ಟಿದ ಹಾಗೆ, ಮಗುವಿಗೆ ಹೆಸರಿಡುವುದು, ಮಗು ಅಮ್ಮ ಎಂದು ಕರೆದ ಹಾಗೆ ಅನ್ನಿಸುತ್ತದೆ. ಈ ರೀತಿ ಕನಸುಗಳು ಮಗು ಹೊಟ್ಟೆಯಲ್ಲಿದ್ದಾಗ ಬೀಳುವುದು ಸಾಮಾನ್ಯ.
ದುಸ್ವಪ್ನಗಳು!:
ಕೆಲವೊಂದು ಕನಸುಗಳು ನಿಮಗೆ ಆತಂಕವನ್ನು ಉಂಟು ಮಾಡುತ್ತದೆ. ಹಣಕಾಸಿನ ವಿಚಾರದ ಬಗ್ಗೆ, ಮಗುವಿನ ವಿಕಾಸದ ಬಗ್ಗೆ ಗೊಂದಲಗಳು ಉಂಟಾಗುತ್ತದೆ. ಕೆಟ್ಟ ಕನಸು ಬಿದ್ದಾಗ ನಿಮಗೆ ಆತಂಕ ಹಾಗೂ ಭಯವಾಗೋದು ಸಹಜ. ಈ ರೀತಿ ಆಗಬಾರದೆಂದರೆ ಒಳ್ಳೆಯ ವಿಚಾರದ ಬಗ್ಗೆ ಮಾತ್ರ ಆಲೋಚನೆ ಮಾಡಿ. ಇನ್ನೂ ಗರ್ಭಿಣಿಯಾಗಿರುವಾಗ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ಹೀಗಾಗಿ ನಿಮಿತವಾಗಿ ಯೋಗ, ಧ್ಯಾನ ಮಾಡೋದ್ರಿಂದ ನಿಮ್ಮನ್ನು ನೀವು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಗರ್ಭಾವಸ್ಥೆ ಸಮಯದಲ್ಲಿ ಕನಸಿನ ಮಾದರಿ ಬದಲಾಗೋದ್ಯಾಕೆ?:
ಗರ್ಭಾವಸ್ಥೆಯಲ್ಲಿ ಬೀಳುವ ಕನಸುಗಳಲ್ಲಿನ ಬದಲಾವಣೆಗಳಿಗೆ ಅನೇಕ ಕಾರಣಗಳಿವೆ. ಇದ್ರಲ್ಲಿ ಹಾರ್ಮೋನುಗಳ ಬದಲಾವಣೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಏರಿಳಿತಗಳು ನಿಮ್ಮ ದೇಹದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ನಿದ್ರೆಗೆ ಅಡ್ಡಿಯುಂಟಾಗುವುದು ಕೂಡ ಕೆಲವೊಮ್ಮೆ ಕನಸಿನಲ್ಲಿ ಬದಲಾವಣೆಯನ್ನು ಉಂಟುಮಾಡಬಹುದು. ಆದ್ದರಿಂದ ಅಂತಹ ಕನಸು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ಕೆಲವು ಸಲಹೆಗಳನ್ನು ಕೆಳಗೆ ನೀಡಲಾಗಿದೆ.
ಕೆಟ್ಟ ಕನಸುಗಳು ಬಾರದಂತೆ ತಡೆಯೋದು ಹೇಗೆ?:
ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಬಗೆ ಕಾಳಜಿ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ಯಾವಾಗಲೂ ಸಾಧ್ಯವಾದಷ್ಟು ಧನಾತ್ಮಕವಾಗಿ ಚಿಂತಿಸಿ. ಇನ್ನೂ ನಿಮ್ಮನ್ನು ನೀವು ಶಾಂತಗೊಳಿಸೋದಕ್ಕೆ ಯೋಗ, ಧ್ಯಾನಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮ್ಮ ಭಾವನೆಗಳ ಬಗ್ಗೆ ನಿಮ್ಮ ಸಂಗಾತಿ, ಆಪ್ತರು ಅಥವಾ ಸ್ನೇಹಿತರೊಂದಿಗೆ ಮಾತನಾಡಿ. ಇದರಿಂದ ನಿಮ್ಮ ನೋವುಗಳು, ನಿಮಗೆ ಕಾಡುವ ದುಃಖಗಳು ಸಾಮಾನ್ಯವೆಂದು ಭಾಸವಾಗುತ್ತದೆ. ನೀವು ನಿದ್ರಾ ವಿಧಾನವನ್ನು ಬದಲು ಮಾಡೋದ್ರ ಮುಖಾಂತರ ಕೂಡ ನಿಮಗೆ ಬೀಳುವ ದುಸ್ವಪ್ನಗಳಿಂದ ತಪ್ಪಿಸಿಕೊಳ್ಳಬಹುದು.