ಆಯುರ್ವೇದದ ನಿಘಂಟುಗಳ ಪ್ರಕಾರ ಇದು ರುಚಿಯನ್ನು ಹೆಚ್ಚಿಸಿ ಜೀರ್ಣಕ್ರಿಯೆಗೆ ಅನುಕೂಲ ಮಾಡಿಕೊಡುತ್ತದೆ. ಎಷ್ಟು ಕಷ್ಟಪಟ್ಟರೂ ಆಹಾರದಿಂದ ತೆಗೆಯಲಾಗದ ವಿಷವನ್ನು ಈ ಕರಿಬೇವು ತೆಗೆಯುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಕಫ ಮತ್ತು ಪಿತ್ತ ದೋಷಗಳನ್ನು ಕಡಿಮೆ ಮಾಡುವಲ್ಲಿ ಕೂಡ ಇದು ಸಹಕಾರಿ. ಸಾಮಾನ್ಯವಾಗಿ ಭೇದಿ ಇರುವಾಗ ಎಂಟರಿಂದ ಹತ್ತು ಎಲೆಗಳನ್ನು ಹಾಗೆ ಅಗೆದು ತಿಂದರೆ ಅನುಕೂಲವಾಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ವಾಂತಿ ಬಂದಂತೆನಿಸುವುದು, ಬಾಯಿಯಲ್ಲಿ ಸಪ್ಪೆ ನೀರು ಬರುವುದು ಮುಂತಾದ ತೊಂದರೆಗಳು ಇರುವವರಿಗೆ (ಗರ್ಭಿಣಿಯರಿಗೆ ಕೂಡ) ಇದು ಅನುಕೂಲಕರ, ಆಮಶಂಕೆ ಸಮಸ್ಯೆ ಇರುವವರು ಊಟದ ಕೊನೆಯಲ್ಲಿ ಬೆಣ್ಣೆ ತೆಗೆದ ಮಜ್ಜಿಗೆಗೆ 5-6 ಎಲೆ ಕರಿಬೇವನ್ನು ಹಾಕಿ ಅಥವಾ ಕರಿಬೇವಿನ ಪೇಸ್ಟ್ ಹಾಕಿ ಸೇವಿಸಿದರೆ ತುಂಬಾ ಅನುಕೂಲವಾಗುತ್ತದೆ.
ನಿತ್ಯವೂ ಒಂದು ದಂಟಿನಲ್ಲಿರುವ ಕರಿಬೇವಿನ ಎಲ್ಲಾ ಎಳೆ ಎಲೆಗಳನ್ನು ಸೇವಿಸುವುದರಿಂದ ಕೂದಲು ಉದುರುವುದು ಮತ್ತು ಬೆಳ್ಳಗಾಗುವುದು ಎರಡೂ ಸಮಸ್ಯೆಗಳು ಕಡಿಮೆಯಾಗುತ್ತವೆ. ತಾಜಾ ಕರಿಬೇವು ಸಿಗದೇ ಇರುವವರು ದಿನದಲ್ಲಿ ಅರ್ಧದಿಂದ ಒಂದು ಚಮಚದಷ್ಟು ಕರಿಬೇವಿನ ಪುಡಿಯನ್ನು ನೀರಿಗೆ ಹಾಕಿ ಸೇವಿಸಬಹುದು. 4 ಚಮಚ ಮೆಂತೆ ಮತ್ತು ಒಂದು ಮುಷ್ಟಿಯಷ್ಟು ಕರಿಬೇವಿನ ತಾಜಾ ಎಲೆಗಳನ್ನು ರಾತ್ರಿ ಇಡೀ ನೀರಿನಲ್ಲಿ ನೆನಸಿ ಮರುದಿನ ಅದನ್ನು ರುಬ್ಬಿ ಆ ಪೇಸ್ಟ್ ಅನ್ನು ತಲೆಗೆ ಪ್ಯಾಕ್ ಮಾಡಿಕೊಳ್ಳುವುದರಿಂದ ಹೊಟ್ಟು, ಕೂದಲು ಒಣಗುವುದು, ಕಳಾಹೀನ ಕೂದಲಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಇದನ್ನು ಮಾಡುತ್ತಾ ಬಂದರೆ ನಿಧಾನವಾಗಿ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ತಾಜಾ ಕರಿಬೇವಿನ ಎಲೆಗಳನ್ನು ಪೇಸ್ಟ್ ಮಾಡಿಕೊಂಡು ಅದನ್ನು ಹುಳಿ ಮಜ್ಜಿಗೆಯಲ್ಲಿ ಸೇರಿಸಿ ತಲೆಗೆ ಹಚ್ಚಿ ಒಣಗುವವರೆಗೆ ಅಂದರೆ ಸುಮಾರು ಒಂದು ತಾಸು ಬಿಟ್ಟು ತೊಳೆದುಕೊಳ್ಳಬೇಕು. ಈ ರೀತಿ ವಾರದಲ್ಲಿ ಮೂರು ಬಾರಿ ಮಾಡಿದರೆ ತಲೆ ಹೊಟ್ಟು ಮತ್ತು ಹೇನಿನ ಸಮಸ್ಯೆ ಕಡಿಮೆಯಾಗುತ್ತದೆ. ಚರ್ಮದ ಆರೋಗ್ಯಕ್ಕೆ ಕೂಡ ಕರಿಬೇವು ಅತ್ಯಂತ ಸಹಾಯಕ, ತಾಜಾ ಎಲೆಗಳನ್ನು ತೆಗೆದುಕೊಂಡು ತಾಜಾ ಅರಿಶಿಣ ಕೊಂಬು ಅಥವಾ ಅರಿಶಿಣದ ಪುಡಿಯನ್ನು ಹಾಕಿ.
ಮಾಡಿದ ಪೇಸ್ಟ್ ಅನ್ನು ಫೇಸ್ ಪ್ಯಾಕ್ ಮಾಡಿಕೊಳ್ಳಬಹುದು ಅಥವಾ ಮೊಡವೆ ಇರುವಲ್ಲಿ ಹಚ್ಚಬಹುದು. ಈ ರೀತಿ ಮಾಡುವುದರಿಂದ ಮುಖದ ಎಣ್ಣೆ ಜಿಡ್ಡು, ಡಾರ್ಕ್ ಸರ್ಕಲ್ಗಳು, ಕಪ್ಪು ಕಲೆಗಳು ಕಡಿಮೆಯಾಗಲು ಸಹಾಯವಾಗುತ್ತದೆ. ಒಟ್ಟಿನಲ್ಲಿ, ನಾವು ನಿತ್ಯವೂ ಕರಿಬೇವನ್ನು ಅಡುಗೆಯಲ್ಲಿ ಬಳಕೆ ಮಾಡಿದರೆ ಇಡೀ ದೇಹದ ಆರೋಗ್ಯಕ್ಕೆ ಸಹಕಾರಿ.