ನುಗ್ಗೆ ಮರದ ಎಲೆ, ಕಾಯಿ, ಹೂವು ಮೊಗ್ಗುಗಳೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಪೂರಕ. ಅದರಲ್ಲೂ ನುಗ್ಗೆ ಎಲೆಗಳ ಸೇವನೆಯಿಂದ ಹಲವಾರು ತೊಂದರೆಗಳಿಗೆ ಔಷಧಿಯ ಪರಿಣಾಮವನ್ನೇ ಪಡೆಯಬಹುದು. ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದು ಕೆಲವರು ನಂಬಿದ್ದಾರೆ.
ಅಡುಗೆಗೆ ಮಾತ್ರವಲ್ಲದೇ ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು. ಅಜೀರ್ಣತೆ ಅಥವಾ ಹೊಟ್ಟೆಯಲ್ಲಿ ನೋವು ಇರುವ ವ್ಯಕ್ತಿಗಳಿಗೆ ನುಗ್ಗೆಕಾಯಿಯ ಸೇವನೆ ಉತ್ತಮ ಪರಿಹಾರ ಒದಗಿಸುತ್ತದೆ. ಇದರ ಸೇವನೆಯಿಂದ ತ್ವಚೆ ಆತ್ಯಂತ ಉತ್ತಮ ಆರೋಗ್ಯ ಪಡೆಯುತ್ತದೆ ಹಾಗೂ ಜೀರ್ಣಕ್ರಿಯೆಯೂ ಸುಲಭಗೊಳ್ಳುತ್ತದೆ ಎಂಬ ಉಲ್ಲೇಖವಿದೆ. ಹಾಗಾದ್ರೆ ನಾವಿಂದು ಯಾವೆಲ್ಲಾ ಔಷಧಿಯಲ್ಲಿ ಈ ನುಗ್ಗೆಸೊಪ್ಪು ಬಳಸುತ್ತಾರೆ.
ಇದರ ಪ್ರಯೋಜನವಾದರೂ ಏನು? ಹೇಗೆ ಬಳಸಬೇಕು ಎಂಬ ಕುತೂಹಲಕಾರಿ ಮಾಹಿತಿ ಪಡೆದುಕೊಳ್ಳೋಣ.
ಸರ್ವ ರೋಗಕ್ಕೂ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ತಡೆಯೊಡ್ಡುತ್ತದೆ. ಹೀಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ವಿಟಮಿನ್ ಸಿ ಈ ನುಗ್ಗೆ ಸೊಪ್ಪಿನಲ್ಲಿದೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೆ ನೀವು ನುಗ್ಗೆ ಸೊಪ್ಪಿನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ಜ್ಯೂಸ್ ಮಾಡಿ ಕುಡಿಯಬೇಕು.
ರಕ್ತ ಹೀನತೆಗೆ ಇದು ರಾಮಬಾಣ:
ನುಗ್ಗೆ ಸೊಪ್ಪಿನಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶ ಇದ್ದು, ಇದು ರಕ್ತ ಹೀನತೆಗೆ ಬಹುಮುಖ್ಯ ಮನೆ ಮದ್ದಾಗಿದೆ. ನುಗ್ಗೆ ಸೊಪ್ಪಿನ ಜ್ಯೂಸ್ಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿಯುವುದು ನಿಮ್ಮಲ್ಲಿ ರಕ್ತ ಹೀನತೆ ನಿವಾರಣೆ ಮಾಡಲಿದೆ. ಇದರ ಜೊತೆ ಮೂಳೆಗಳ ಬೆಳವಣಿಗೆಗೆ ಇದು ಸಹಕಾರಿ. ಇದರಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿದ್ದು, ಮೂಳೆಗಳ ಆರೋಗ್ಯಕ್ಕೂ ಅತ್ಯಂತ ಒಳ್ಳೆಯದು
ಬರಪೂರ ವಿಟಮಿನ್ ಎ:
ನುಗ್ಗೆ ಸೊಪ್ಪಿನಲ್ಲಿ ನೀವು ಊಹಿಸದಷ್ಟು ವಿಟಮಿನ್ ಎ ಅಂಶವಿದೆ. ನೀವು 100 ಗ್ರಾಮ್ ಹಸಿ ಕ್ಯಾರೆಟ್ ಸೇವಿಸುವಷ್ಟು ವಿಟಮಿನ್ ಈ ನುಗ್ಗೆ ಸೊಪ್ಪಿನಲ್ಲಿ ಸಿಗುತ್ತದೆ. ಜೊತೆಗೆ ಬೀಟಾ ಕೆರೋಟಿನ್ ಸಹ ಇದರಲ್ಲಿ ಸಿಗಲಿದೆ. ನುಗ್ಗೆ ಸೊಪ್ಪು ನಿತ್ಯ ಸೇವಿಸಿದರೆ ನಿಮ್ಮ ಕಣ್ಣಿನ ದೃಷ್ಟಿ ಸಹ ಚರುಕಾಗುತ್ತದೆ.
100 ಗ್ರಾಮ್ ನುಗ್ಗೆ ಸೊಪ್ಪು ಎಲ್ಲದಕ್ಕೂ ಮದ್ದು:
ಇನ್ನು ಬರೀ 100 ಗ್ರಾಮ್ ನುಗ್ಗೆ ಸೊಪ್ಪಿನಲ್ಲಿ ನಿಮ್ಮ ದೈನಂದಿನ ಜೀವನಕ್ಕೆ ಅಗತ್ಯವಾದ ಎಲ್ಲಾ ಅಂಶಗಳು ಸಿಗುತ್ತವೆ. ಅದರಲ್ಲೂ 100 ಗ್ರಾಮ್ ಸೊಪ್ಪಿನಲ್ಲಿ 90 ಕ್ಯಾಲೋರಿ ಎನರ್ಜಿ, 7 ಗ್ರಾಮ್ ಪ್ರೋಟಿನ್, ವಿಟಮಿನ್ ಸಿ 220 ಮಿ.ಗ್ರಾಮ್ ಸಿಗಲಿದೆ. ಅಂದರೆ ಒಂದು ಕಿತ್ತಲೆ ಹಣ್ಣಿನಲ್ಲಿ ನಿಮಗೆ ಬರಿ 70 ಮಿ.ಗ್ರಾಮ್ ವಿಟಮಿನ್ ಸಿ ಸಿಗಲಿದೆ ಆದರೆ 100 ಗ್ರಾಮ್ ಸೊಪ್ಪಿನಲ್ಲಿ ಅದಕ್ಕಿಂತ ಹೆಚ್ಚು ಸಿಗಲಿದೆ. ಜೊತೆಗೆ ಈ 100 ಗ್ರಾಮ್ನಲ್ಲಿ 215 ಮಿ.ಗ್ರಾಮ್ ಪೊಟಾಷಿಯಂ ಸಿಗಲಿದೆ. ಹೀಗಾಗಿ ನಿಮ್ಮ ಬಿಪಿ ಕಂಟ್ರೋಲ್ ಮಾಡಲು ನಿಮಗೆ ನುಗ್ಗೆ ಸೊಪ್ಪು ಸತ್ಯಂತ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಕಾರಣ ಇದರಿಂದ ನಿಮ್ಮ ತೂಕ ಇಳಿಸಲು ಸಹ ಸಹಕಾರಿಯಾಗಿದೆ.