ಸಂಬಂಧಗಳು ನಿಂತಿರುವುದು ನಂಬಿಕೆಗಳ ಮೇಲೆ. ಈ ನಂಬಿಕೆಗಳ ಕಳೆದುಕೊಂಡರೆ ಅದೆಂತಹ ಸಂಬಂಧವೇ ಆದರೂ ಮುರಿದು ಬೀಳುತ್ತೆ. ಈ ಸಂಬಂಧದಲ್ಲಿ ನಂಬಿಕೆ ಗಳಿಸೋದು ಎಷ್ಟು ಕಷ್ಟವೋ ಹಾಗೆಯೇ ನಂಬಿಕೆ ಉಸಿಕೊಳ್ಳೋದು ಸಹ ಅಷ್ಟೇ ಸವಾಲು.
ಹೀಗೆ ನಿಮ್ಮ ಜೀವನದುದ್ದಕ್ಕೂ ಸಂಬಂಧಗಳ ಪಾತ್ರ ಬದಲಾಗಬಹುದು, ಹಾಗೆ ಬದಲಾದ ಸಂಬಂಧ ಉಳಿಸಿಕೊಳ್ಳುವುದು ಸಹ ಮುಖ್ಯ. ಈ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕು ಅಂದರೆ ಕೆಲ ಅಂಶಗಳ ನೀವು ಗಮನದಲ್ಲಿಡಿ.
1. ಆರೋಗ್ಯದ ಬಗ್ಗೆ ಕಾಳಜಿ:
ಆರೋಗ್ಯಕರ ಸಂಬಂಧದಲ್ಲಿ, ನಿಮ್ಮ ಸಂಬಂಧದ ಗುಣಮಟ್ಟ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಮುಖ್ಯವಾಗಿದೆ. ಅಂದರೆ ನಿಮ್ಮ ಪ್ರೀತಿ ಪಾತ್ರರ ಆರೋಗ್ಯದ ಕಡೆಯೂ ನಿಮ್ಮ ಗಮನವಿದ್ದರೆ ಆ ಸಂಬಂಧದಲ್ಲಿ ಇನ್ನಷ್ಟು ಪ್ರೀತಿ, ವಿಶ್ವಾಸ ಮೂಡಲಿದೆ. ದಾಂಪತ್ಯ ಸಂಬಂಧ ಉತ್ತಮವಾಗಿರಬೇಕೆಂದರೆ ಗಂಡ-ಹೆಂಡತಿ ಪರಸ್ಪರ ಆರೋಗ್ಯದ ಕುರಿತು ಕಾಳಜಿ ವಹಿಸಿ.
2. ಪರಸ್ಪರ ಗೌರವ:
ನಿಮ್ಮ ಪ್ರೀತಿ ಪಾತ್ರರನ್ನು ಗೌರವದಿಂದ ಕಾಣುವುದು ಆ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಕಾರಣವಾಗುತ್ತದೆ. ಆಕೆ ಅಥವಾ ಆತನ ವಿಚಾರದಾರೆಗಳನ್ನು ಗೌರವಿಸುವುದು ನೀವು ಅವರ ಪರ ನಿಂತಿದ್ದೀರಾ ಎಂಬ ಭಾವನೆ ಮೂಡಿಸುತ್ತದೆ. ಇದು ಅವರಲ್ಲಿ ಹೊಸ ಚೈತನ್ಯ ತರಲಿದ್ದು, ನಿಮ್ಮ ಕುರಿತು ಅವರಲ್ಲಿ ನಂಬಿಕೆ ಹೆಚ್ಚಾಗಲಿದೆ. ಅಂದರೆ ಅವರ ಮುಂದಷ್ಟೇ ಗೌರವದಿಂದ ನಡೆದುಕೊಳ್ಳುವುದಲ್ಲ. ಬದಲಿಗೆ ಅವರನ್ನು ಪ್ರಾಮಾಣಿಕವಾಗಿ ಗೌರವಿಸಿ, ಇತರರ ಬಳಿಯೂ ಅವರ ಕುರಿತು ಉತ್ತಮ ಅಭಿಪ್ರಾಯ ಹಂಚಿಕೊಳ್ಳಿ
3. ಮಾತುಕತೆ:
ಸಂಬಂಧದಲ್ಲಿ ಬಿರುಕು ಮೂಡುವುದರಲ್ಲಿ ಮಾತುಕತೆ ಕೊರತೆಯೂ ಕಾರಣವಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರ ಜೊತೆ ಒಳ್ಳೆಯ ಸಂಬಂಧ ಬೆಳೆಯಬೇಕಾದರೆ ಸಂವಹನ ಯಾವಾಗಲೂ ಉತ್ತಮವಾಗಿರಬೇಕು. ದಿನದಲ್ಲಿ ಒಂದಿಷ್ಟು ಹೊತ್ತು ಅವರ ಜೊತೆ ಮಾತುಕತೆಯಲ್ಲಿ ತೊಡಗಿದರೆ ಇಬ್ಬರ ನಡುವಿನ ಅದೆಷ್ಟೋ ವಿಚಾರಗಳು ಹೊರಬಂದು ಮರುಕ್ಷಣ ಹಗುರಾಗಬಹುದು. ಆದರೆ ಅಹಂನಿಂದಾಗಿ ಮಾತುಕತೆಗೆ ಬ್ರೇಕ್ ಬಿದ್ದರೆ ಸಂಬಂಧಗಳ ನಡುವಿನ ಕಂದಕ ಮತ್ತಷ್ಟು ದೊಡ್ಡದಾಗುವುದರಲ್ಲಿ ಅನುಮಾನವೇ ಇಲ್ಲ.
4, ವೈಯಕ್ತಿಕ ವಿಚಾರ ಹಂಚಿಕೊಳ್ಳಿ:
ನಿಮ್ಮ ಆಪ್ತರಲ್ಲಿ ವೈಯಕ್ತಿಕ ವಿಚಾರಗಳ ಹಂಚಿಕೊಳ್ಳುವುದು ಸಹ ಆರೋಗ್ಯಕರ ಸಂಬಂಧದ ಲಕ್ಷಣಗಳಲ್ಲಿ ಒಂದಾಗಿದೆ. ಅವರ ವೈಯಕ್ತಿಕ ವಿಚಾರಗಳ ಗೌರವಿಸುವುದರ ಜೊತೆ ನಿಮ್ಮ ವೈಯಕ್ತಿಕ ವಿಚಾರಗಳನ್ನು ಮುಕ್ತವಾಗಿ ಅವರ ಬಳಿ ಹಂಚಿಕೊಂಡಾಗಲೇ ನಂಬಿಕೆ ಎಂಬ ಸಂಬಂಧಗಳ ಮೂಲಮಂತ್ರ ಮತ್ತಷ್ಟು ಹೆಚ್ಚಾಗುತ್ತದೆ.
5. ಪ್ರಾಮಾಣಿಕತೆ:
ಯಾವುದೇ ಬಂಧ ಗಟ್ಟಿಯಾಗಿರಬೇಕಾದ್ರೆ ಅಲ್ಲಿ ಪ್ರಾಮಾಣಿಕತೆ ಮುಖ್ಯವಾಗಿರುತ್ತೆ. ನೀವು ಸಂಬಂಧವನ್ನು ಎಷ್ಟು ಪ್ರಾಮಾಣಿಕವಾಗಿ ನಿಭಾಯಿಸುತ್ತಿರೋ ಅಷ್ಟು ಗಾಢವಾಗುತ್ತದೆ. ಸಂಬಂಧಗಳನ್ನು ಗೌರವಿಸಿ ನೀವೆಷ್ಟು ಪ್ರಾಮಾಣಿಕರಾಗಿ ಅದನ್ನು ಮುಂದುವರೆಸುತ್ತೀರೋ ಅದರ ಮೇಲೆ ಸಂಬಂಧಗಳ ಆಯಸ್ಸು ನಿರ್ಧರವಾಗುತ್ತದೆ. ಪ್ರಾಮಾಣಿಕತೆ ಎಂಬುದು ಮರೆಯಾದಾಗ ಸಂಬಂಧ ಕಡಿದು ಬೀಳುವ ಸಾಧ್ಯತೆ ಹೆಚ್ಚಾಗುತ್ತದೆ.