ಭೇದಿ ಶುರುವಾಗಿದ್ದರೆ ಈ ನಾಲ್ಕು ಪದಾರ್ಥದ ಕಷಾಯ ಮಾಡಿ! ಹೊಟ್ಟೆ ಕ್ಲೀನ್ ಆಗುತ್ತೆ

ಭೇದಿ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ಹೊಟ್ಟೆ ನೋವು, ಸೆಳೆತ ಮತ್ತು ಪದೇ ಪದೆ ಶೌಚಾಲಯಕ್ಕೆ ಹೋಗುವಂತೆ ಮಾಡುತ್ತದೆ. ಇದರಿಂದ ದೇಹವು ದುರ್ಬಲವಾಗುತ್ತದೆ. ಆದರೆ, ಆಯುರ್ವೇದದ ಕಷಾಯದ ಮೂಲಕ ಈ ಸಮಸ್ಯೆಗೆ ನೈಸರ್ಗಿಕ ಪರಿಹಾರ ಕಂಡುಕೊಳ್ಳಬಹುದು. ಈ ಕಷಾಯವು ಕೇವಲ ಭೇದಿಯನ್ನು ನಿಯಂತ್ರಿಸುವುದಿಲ್ಲ. ಜೊತೆಗೆ ಕರುಳಿನ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಇಲ್ಲಿದೆ ಆಯುರ್ವೇದ ಕಷಾಯದ ಅದ್ಭುತ ಪರಿಹಾರ.

ಆರೋಗ್ಯಕರ ಕರುಳು ಆರೋಗ್ಯಕರ ಜೀವನಕ್ಕೆ ಅಡಿಪಾಯ. ಆಯುರ್ವೇದವು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ನೀಡುತ್ತದೆ. ನಿಮ್ಮ ಅಡುಗೆ ಮನೆಯಲ್ಲಿ ಇರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಭೇದಿಗೆ ಪರಿಹಾರ ಕಂಡುಕೊಳ್ಳಬಹುದು. ಔಷಧಗಳಿಲ್ಲದೆ, ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ಭೇದಿಯನ್ನು ನಿಯಂತ್ರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಆಯುರ್ವೇದ ಕಷಾಯವು ಸಹಾಯ ಮಾಡುತ್ತದೆ. ಈ ಕಷಾಯವನ್ನು ತಯಾರಿಸುವುದು ಅತ್ಯಂತ ಸರಳ.

ಕಷಾಯಕ್ಕೆ ಬೇಕಾಗುವ ಕೇವಲ ನಾಲ್ಕು ಸರಳ ಪದಾರ್ಥಗಳು. ಈ 4 ಪದಾರ್ಥಗಳ ಕಷಾಯ ಕರುಳನ್ನು ಗುಣಪಡಿಸುತ್ತದೆ. ಅವು ಈ ಕೆಳಗಿನಂತಿವೆ.  

ಕೊತ್ತಂಬರಿ ಬೀಜ: 
ಕೊತ್ತಂಬರಿ ಬೀಜವು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಹೆಸರುವಾಸಿ. ಈ ಬೀಜಗಳು ದೇಹವನ್ನು ತಂಪು ಮಾಡುವ ಗುಣಗಳನ್ನು ಹೊಂದಿವೆ.

ಜೀರಿಗೆ:
ಇದು ಆಂಟಿಮೈಕ್ರೋಬಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಗಳನ್ನು ಹೊಂದಿದೆ. ಜೀರಿಗೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ನೋವನ್ನು ನಿವಾರಿಸುತ್ತದೆ.

ಮಿಶ್ರಿ / ಕಲ್ಲು ಸಕ್ಕರೆ:
ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಭೇದಿಯಿಂದ ಉಂಟಾಗುವ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಕಷಾಯಕ್ಕೆ ಸಿಹಿಯನ್ನು ನೀಡುತ್ತದೆ, ನಿಮಗೆ ಕಷಾಯ ಕುಡಿಯಲು ಸುಲಭವಾಗಿಸುತ್ತದೆ.

ಒಣ ಶುಂಠಿ:
ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ. ಒಣ ಶುಂಠಿಯು ಜೀರ್ಣಕಾರಿ ಅಗ್ನಿಯನ್ನು ಉತ್ತೇಜಿಸುತ್ತದೆ. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತೆ.

ಕಷಾಯ ತಯಾರಿಸುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರನ್ನು ಹಾಕಿ. ಅದಕ್ಕೆ 1 ಸ್ಪೂನ್ ಕೊತ್ತಂಬರಿ ಬೀಜ, 1 ಸ್ಪೂನ್ ಜೀರಿಗೆ, ಒಂದು ಸಣ್ಣ ತುಂಡು ಒಣ ಶುಂಠಿ ಮತ್ತು 2 ಸಣ್ಣ ತುಂಡು ಕಲ್ಲು ಸಕ್ಕರೆ ಅಥವಾ ರುಚಿಗೆ ತಕ್ಕಷ್ಟು ಮಿಶ್ರಿ ಸೇರಿಸಿ. ಈ ಮಿಶ್ರಣವನ್ನು ಕುದಿಯಲು ಬಿಡಿ. ನಂತರ ಉರಿಯನ್ನು ಕಡಿಮೆ ಮಾಡಿ. ನೀರು ಅರ್ಧದಷ್ಟು ಆಗುವವರೆಗೆ ಸುಮಾರು 5 ರಿಂದ 7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಈಗ ಕಷಾಯವನ್ನು ಸೋಸಿಕೊಳ್ಳಿ. ಬೆಚ್ಚಗಿರುವಾಗಲೇ ಇದನ್ನು ಸೇವಿಸಿ. ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ ಈ ಕಷಾಯವನ್ನು ಕುಡಿಯಬಹುದು.

ಈ ಕಷಾಯ ಹೇಗೆ ಕೆಲಸ ಮಾಡುತ್ತೆ? 

• ಕರುಳಿನ ಉರಿಯೂತ ಶಮನ: 
ಜೀರಿಗೆ ಮತ್ತು ಕೊತ್ತಂಬರಿ ಬೀಜಗಳು ಕರುಳಿನಲ್ಲಿನ ಯಾವುದೇ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಿಂದಾಗಿ ಹೊಟ್ಟೆ ನೋವು ಮತ್ತು ಅಸ್ವಸ್ಥತೆ ಕಡಿಮೆಯಾಗುತ್ತದೆ. 

• ಅಧಿಕ ಪಿತ್ತ ಸಮತೋಲನ: 
ದೇಹದಲ್ಲಿ ಪಿತ್ತ ದೋಷ ಹೆಚ್ಚಾದಾಗ ಭೇದಿ ಉಂಟಾಗಬಹುದು. ಈ ಕಷಾಯವು ಪಿತ್ತವನ್ನು ಸಮತೋಲನಗೊಳಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸುತ್ತದೆ ಎಂದು ಆಯುರ್ವೇದ ಹೇಳುತ್ತದೆ. 

• ನಿರ್ಜಲೀಕರಣವನ್ನು ತಡೆಯುತ್ತದೆ: 
ಭೇದಿಯಿಂದ ದೇಹವು ನೀರನ್ನು ಕಳೆದುಕೊಳ್ಳುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಈ ಕಷಾಯವು ದೇಹದಲ್ಲಿನ ನೀರಿನ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. 

• ಕರುಳಿನ ಸೋಂಕಿನ ವಿರುದ್ಧ ಹೋರಾಟ: 
ಶುಂಠಿ ಮತ್ತು ಜೀರಿಗೆಯಲ್ಲಿರುವ ಆಂಟಿಮೈಕ್ರೋಬಿಯಲ್ ಗುಣಗಳು ಕರುಳಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ.

ಇದು ಸೋಂಕಿನಿಂದ ಉಂಟಾಗುವ ಭೇದಿಯನ್ನು ಗುಣಪಡಿಸುತ್ತದೆ. ಒಟ್ಟಾರೆಯಾಗಿ, ಮಾತ್ರೆಗಳಿಲ್ಲದೆ ಕೇವಲ ನಿಮ್ಮ ಅಡುಗೆ ಮನೆಯಲ್ಲಿನ ಗಿಡಮೂಲಿಕೆಗಳೊಂದಿಗೆ ಭೇದಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕಷಾಯವನ್ನು ನಿರಂತರವಾಗಿ ಸೇವಿಸುವುದರಿಂದ ನಿಮ್ಮ ಕರುಳಿನ ಆರೋಗ್ಯ ಸುಧಾರಿಸಬಹುದು. ಅಲ್ಲದೆ, ದೈನಂದಿನ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ.