ಹಬ್ಬದ ಸಮಯದಲ್ಲಿ ಮಸಾಲ ಕೋಡುಬಳೆ ಮಾಡಿ! ಸುಲಭ ವಿಧಾನ

 
ಶ್ರಾವಣ ಮಾಸದಲ್ಲಿ ಮತ್ತೊಂದು ವಿಶೇಷ ಹಬ್ಬ ಎಂದರೆ ಅದು ಕೃಷ್ಣ ಜನ್ಮಾಷ್ಠಮಿ. ಈ ಹಬ್ಬದಲ್ಲಿ ಹಲವು ರೀತಿ ತಿಂಡಿ ಮಾಡುವುದು ನಿಮ್ಮ ಆಲೋಚನೆ ಆಗಿರಬಹುದು. ಹಾಗೆ ಶ್ರಾವಣದಲ್ಲಿ ಬಹಳಷ್ಟು ಹಬ್ಬಗಳು ಬಂದೇ ಬರುತ್ತವೆ. ಈ ಹಬ್ಬಗಳಲ್ಲಿ ಸಿಹಿ ತಿಂಡಿ, ಕರಿದ ತಿಂಡಿಗಳು ಮಾಡಿಯೇ ಮಾಡುತ್ತೀರಿ. ಹಾಗೆ ಈ ಹಬ್ಬದಲ್ಲು ಮನೆ ಮಂದಿಯಲ್ಲ ಕುಳಿತು ಸವಿಯುವಂತಹ ಹಾಗೆ ಕೃಷ್ಣನಿಗೂ ಮೆಚ್ಚಿನ ತಿಂಡಿ ಮಾಡಿ ಸವಿಯುವುದು ಹೇಗೆ ನೋಡೋಣ.

ನಾವಿಂದು ಮಸಾಲೆ ಭರಿತವಾಗಿ ಎಲ್ಲರ ಬಾಯಲ್ಲಿ ನೀರು ತರಿಸುವಂತಹ ರುಚಿ ರುಚಿಯಾದ ಕೋಡುಬಳೆ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಹಾಗಾದ್ರೆ ಗರಿ ಗರಿಯಾದ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. 

ಮಸಾಲ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? 

ಅಕ್ಕಿ ಹಿಟ್ಟು 

ಮೈದಾ ಹಿಟ್ಟು 

ಹುರಿಗಡಲೆ 

ಇಂಗು 

ಉಪ್ಪು 

ಕರಿಬೇವು 

ಖಾರದ ಪುಡಿ 

ಒಣ ಕೊಬ್ಬರಿ 

ಮಸಾಲ ಕೋಡುಬಳೆ ಮಾಡುವುದು ಹೇಗೆ? 

ಮೊದಲು ಒಂದು ಬೌಲ್ನಲ್ಲಿ ಅಳತೆ ಕಪನಲ್ಲಿ 1 ಕಪ್ ಅಕ್ಕಿ ಹಿಟ್ಟು ಹಾಕಿ ಬಳಿಕ ಇದಕ್ಕೆ ಕಾಲು ಕಪ್ ಮೈದಾ ಹಿಟ್ಟು ಹಾಕಿ ಒಂದೆರಡು ನಿಮಿಷಗಳ ಕಾಲ ಹುರಿದುಕೊಳ್ಳಬೇಕು. ಈಗ ಮಿಕ್ಸಿ ಜಾರ್ನಲ್ಲಿ ಕಾಲು ಕಪ್ ಹುರಿಗಡಲೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ನಂತರ ಇದಕ್ಕೆ ಕಾಲು ಕಪ್ ಒಣ ಕೊಬ್ಬರಿ, ಉಪ್ಪು ಖಾರದ ಪುಡಿ, ಇಂಗು, ಕರಿಬೇವು ಹಾಕಿ ಮತ್ತೆ ಮಿಕ್ಸರ್ನಲ್ಲಿ ಪುಡಿ ಮಾಡಿಕೊಳ್ಳಿ.

ಈಗ ರುಬ್ಬಿರುವ ಈ ಪುಡಿಯನ್ನು ಕೂಡ ಅಕ್ಕಿ, ಮೈದಾ ಜೊತೆಗೆ ಸೇರಿಸಿ ಮಿಕ್ಸ್ ಮಾಡಿಕೊಂಡು ಚಿಟಿಕೆ ಅಜ್ವೈನಾ ಕೂಡ ಇದಕ್ಕೆ ಹಾಕಿಕೊಳ್ಳಬೇಕು. ನಂತರ 2 ಸ್ಪೂನ್ ಬಿಸಿ ಎಣ್ಣೆ ಕೂಡ ಇದಕ್ಕೆ ಹಾಕಿಕೊಳ್ಳಬೇಕು. ನಂತರ ಚೆನ್ನಾಗಿ ಕೈಯಿಂದಲೇ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಹದ ಮಾಡಿಕೊಳ್ಳಬೇಕು. ಈ ಹಿಟ್ಟು ತೀರ ತೆಳುವಾಗಿ ಇರಬಾರದು ಹಾಗೆ ದಪ್ಪವೂ ಆಗಬಾರದು. ಆ ರೀತಿ ಹದ ಮಾಡಿ. ಚಪಾತಿ ಹಿಟ್ಟಿನಂತಹ ಹದಕ್ಕೆ ಬಂದರೂ ಸಾಕಾಗುತ್ತದೆ. ಈಗ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚಪಾತಿ ಮಣೆಯಲ್ಲಿ ಉದ್ದ ಉದ್ದ ಕಡ್ಡಿಯ ರೀತಿಯಲ್ಲಿ ಮಾಡಿಕೊಳ್ಳಿ ಈ ಕಡ್ಡಿಯಾಕಾರವಾಗಿ ಹಿಟ್ಟನ್ನು ಲಟ್ಟಿಸಿ ಎರಡೂ ತುದಿಗಳನ್ನು ಅಂಟಿಸಿಕೊಂಡು ಕೋಡುಬಳೆ ಆಕಾರಕ್ಕೆ ತನ್ನಿ. 

ಇದು ನೋಡಲು ದಪ್ಪವಾಗಿರಲಿ. ಹಾಗೆ ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಹಲವು ಕೋಡುಬಳೆಗಳ ಅದರಲ್ಲಿ ಹಾಕಿ ಕರಿಯಲು ಬಿಡಿ. ಚೆನ್ನಾಗಿ ಕರಿದ ಬಳಿಕ ತೆಗೆದು ಜರಡಿಯಲ್ಲಿ ಹಾಕಿಡಿ. ಇಷ್ಟಾದರೆ ಸವಿಯಲು ನಿಮ್ಮ ಮುಂದೆ ರುಚಿ ರುಚಿಯ ಕೋಡುಬಳೆ ರೆಡಿಯಾಗುತ್ತದೆ. ಹಬ್ಬದಲ್ಲಿ ಈ ಕೋಡುಬಳೆ ಸವಿಯಲು ಬಹಳ ಇಷ್ಟವಾಗುತ್ತೆ. ಹಾಗೆ ಸುಲಭವಾಗಿ ಇದನ್ನು ಮಾಡಿ ಮುಗಿಸಬಹುದು. ನೀವು ಕೂಡ ಮನೆಯಲ್ಲಿ ಇದನ್ನು ಮಾಡಿ ನೋಡಿ. ಹಲವು ದಿನಗಳ ಕಾಲ ಇಟ್ಟು ಇದನ್ನು ಸವಿಯಬಹುದು.