ಸುಲಭ ರೀತಿಯಲ್ಲಿ ಗರಿ ಗರಿಯ ನಿಪ್ಪಟ್ಟು ಮಾಡಿ! ಇಲ್ಲಿದೆ ವಿಧಾನ

ಹಬ್ಬದಲ್ಲಿ ಸಿಹಿ ತಿಂಡಿ ಇರಲೇಬೇಕು. ಅದರಲ್ಲೂ ಸುಲಭವಾಗಿ ಮಾಡುವ ಸಿಹಿ ತಿಂಡಿ ಹಾಗೆಯೇ ಕರಿದ ತಿಂಡಿಗಳನ್ನು ಮಾಡಿಯೇ ಮಾಡುತ್ತೀರಿ. ಅದರಲ್ಲೂ ಮಸಾಲೆ ಭರಿತ ನಿಪ್ಪಟ್ಟು ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಈ ನಿಪ್ಪಟ್ಟು ಬಹಳ ರುಚಿಯಾಗಿ ಗರಿ ಗರಿಯಾಗಿ ಸವಿದು ನೋಡಿ.

ನಿಪ್ಪಟ್ಟನ್ನು ಊಟದ ಜೊತೆಗೂ ಸವಿಯುವುದು ನೋಡಬಹುದು. ಅದರಲ್ಲೂ ಹಬ್ಬದ ಸಮಯದಲ್ಲಂತು ಊಟಕ್ಕೆ ಈ ನಿಪ್ಪಟ್ಟು ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ರುಚಿ ರುಚಿಯ ನಿಪ್ಪಟ್ಟು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.

ಅಂಗಡಿ, ಬೇಕರಿಯಲ್ಲಿ ಸಿಗುವಂತಹ ಅಂಗೈ ಅಗಲದ ನಿಪ್ಪಟ್ಟನ್ನು ನೀವು ಮನೆಯಲ್ಲೇ ಮಾಡಿ ಸವಿದರೆ ಬಹಳ ರುಚಿಯಾಗಿರಲಿದೆ. ಹಾಗಾದ್ರೆ ಈ ಮಸಾಲೆ ನಿಪ್ಪಟ್ಟು ಮಾಡುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.

ಬೇಕಾಗುವ ವಸ್ತುಗಳು: 

ಶೇಂಗಾ 

ಅಕ್ಕಿ ಹಿಟ್ಟು 

ಹುರಿಗಡಲೆ 

ಕರಿಬೇವಿನ ಸೊಪ್ಪು 

ಉಪ್ಪು 

ಎಣ್ಣೆ 

ಖಾರದ ಪುಡಿ 

ಒಂಕಾಳು 

ಜೀರಿಗೆ 

ಎಳ್ಳು 

ಮಸಾಲೆ ನಿಪ್ಪಟ್ಟು ಮಾಡುವುದು ಹೇಗೆ? 

ಮೊದಲು ಒಂದು ಅಳತೆ ಕಪ್ನಲ್ಲಿ ಅರ್ಧ ಕಪ್ನಷ್ಟು ಹುರಿದು ಸಿಪ್ಪೆದಿದ್ದ ಶೇಂಗಾ ಬೀಜ ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜಾರ್ಗೆ ಹಾಕಿ ಹಾಗೆ ಕಾಲು ಕಪ್ ಹುರಿಗಡಲೆ ಕೂಡ ಹಾಕಿ ತರಿ ತರಿಯಾಗಿ ರುಬ್ಬಿ ತೆಗೆದಿಟ್ಟುಕೊಳ್ಳಿ. ಈಗ ಒಂದು ಪಾತ್ರೆಗೆ ಒಂದು ಕಪ್ ನುಣ್ಣಗಿರುವ ಅಕ್ಕಿ ಹಿಟ್ಟನ್ನು ಹಾಕಿಕೊಳ್ಳಬೇಕು. ಈ ಅಕ್ಕಿ ಹಿಟ್ಟಿಗೆ ಮೊದಲು ತರಿ ತರಿಯಾಗಿ ರುಬ್ಬಿಕೊಂಡಿದ್ದ ಶೇಂಗಾ ಹಾಗೂ ಹುರಿಗಡಲೆ ಪುಡಿಯನ್ನು ಕೂಡ ಹಾಕಿಕೊಳ್ಳಿ. ಈಗ ಸಣ್ಣದಾಗಿ ಕತ್ತರಿಸಿಕೊಂಡಿರುವ ಕರಿಬೇವಿನ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಗೆ ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಖಾರ, ಹಾಗೆ ಓಂಕಾಳು, ಜೀರಿಗೆ, ಒಂದು ಚಮಚ ಎಳ್ಳು ಹಾಕಿ ಡ್ರೈ ಮಿಕ್ಸ್ ಮಾಡಿ.

ಈಗ 2 ಸ್ಪೂನ್ನಲ್ಲಿ 2 ಸ್ಪೂನ್ ಎಣ್ಣೆ ಕೂಡ ಹಾಕಿ ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳುತ್ತಾ ಮಿಕ್ಸ್ ಮಾಡಬೇಕು. ಸುಮಾರು ಅರ್ಧ ಕಪ್ ನೀರು ಬಳಸಿದರೆ ಸಾಕು. ಈ ಹಿಟ್ಟು ಗಟ್ಟಿಯಾಗಿ ಬರಬೇಕು. ಕೈಯಲ್ಲಿ ಉಂಡೆ ಕಟ್ಟಿದರೆ ಮೃದುವಾಗಿರಲಿ. ಆದ್ರೆ ನೀರಿನ ಅಂಶ ಹೆಚ್ಚಾಗಿ ಇರಬಾರದು. ಈಗ ಚಪಾತಿ ಲಟ್ಟಿಸಿಕೊಳ್ಳವ ಮಣೆ ಹಾಗೂ ಲಟ್ಟಣಿಗೆ ತೆಗದುಕೊಂಡು ಸ್ವಲ್ಪ ಎಣ್ಣೆ ಹಚ್ಚಿಕೊಂಡು ಮಧ್ಯದಲ್ಲಿ ಸಣ್ಣ ಹಿಟ್ಟಿನ ಉಂಡೆ ಇಟ್ಟು ನಿಧಾನಾಗಿ ಲಟ್ಟಿಸಿಕೊಳ್ಳಿ. ಚಪಾತಿಯಂತೆ ದೊಡ್ಡದಾಗಿ ಮೊದಲು ಲಟ್ಟಿಸಿಕೊಳ್ಳಿ. ಅನಂತರ ನಿಮ್ಮ ಗಾತ್ರಕ್ಕೆ ಅನುಗುಣವಾಗಿ ಯಾವುದಾದರು ಇಡ್ಲಿ ಕಪ್, ಊಟದ ಬಾಕ್ಸ್ ತೆಗೆದುಕೊಂಡು ಅದನ್ನು ಹಿಟ್ಟಿನ ಮೇಲೆ ಒತ್ತಿಕೊಂಡು ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. 

ಇದೇ ವಿಧಾನದಲ್ಲಿ ಎಲ್ಲಾ ಹಿಟ್ಟನ್ನು ಕೂಡ ನೀವು ಉಂಡೆಯಿಂದ ನಿಪ್ಪಟ್ಟು ಮಾಡಿ ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಕಾಯಲು ಬಿಡಿ. ನಂತರ ಒಂದೇ ನಿಪ್ಪಟ್ಟು ಮೊದಲು ಹಾಕಿ ನಿಪ್ಪಟ್ಟು ಮೇಲೆ ಬರಲು ಬಿಡಿ. ಮೇಲೆ ಬಂದ ಬಳಿಕ ತಿರುಗಿಸಿಕೊಳ್ಳುತ್ತಾ ಎರಡೂ ಕಡೆಗಳಲ್ಲಿ ಕರಿದುಕೊಳ್ಳಿ ಇಷ್ಟಾದರೆ ನಿಮ್ಮ ಮುಂದೆ ಗರಿ ಗರಿಯ ಮಸಾಲ ನಿಪ್ಪಟ್ಟು ರೆಡಿಯಾಗುತ್ತದೆ. ಇದನ್ನು ಮನೆಯಲ್ಲಿ ಎಲ್ಲರೂ ಸವಿಯಲು ಇಷ್ಟಪಡುತ್ತಾರೆ, ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.