ಮನೆಮನೆಗೆ ಗೊತ್ತಿರುವ ರವೆ ಇಡ್ಲಿಗೆ ಹೋಲಿಕೆಯಾಗದ ಒಂದು ಅದ್ಭುತ ಡಿಶ್ ಎಂದರೆ ತುಪ್ಪದ ಪೋಡಿ ಇಡ್ಲಿ. ಇಡ್ಲಿಗೆ ಮಸಾಲೆಯ ಸ್ಪರ್ಶ ಬಂದಾಗ, ಅದರ ರುಚಿ ಒಂದಿಷ್ಟು ಹೆಚ್ಚು ಜಾಸ್ತಿ ಆಗುತ್ತೆ. ಮಸಾಲೆ ಜೊತೆ ತುಪ್ಪದಲ್ಲಿ ಕರಿಯಲ್ಪಟ್ಟ ಇಡ್ಲಿಯ ರುಚಿ, ಹತ್ತಿರದ ಹೋಟೆಲ್ನಲ್ಲೂ ಸಿಗೋದು ಅಸಾಧ್ಯ.
ತುಪ್ಪದ ಪೊಡಿ ಇಡ್ಲಿ ದಕ್ಷಿಣ ಭಾರತದ ವಿಶೇಷ ಖಾದ್ಯವಾಗಿದೆ. ಇದನ್ನು ಆರೋಗ್ಯಕರ ಬೆಳಗಿನ ಉಪಹಾರ ಅಥವಾ ಸಂಜೆಯ ತಿಂಡಿಯಾಗಿ ಸವಿಯಬಹುದು. ಈ ರುಚಿಕರವಾದ ತಿಂಡಿಯನ್ನು 15 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು. ಇಡ್ಲಿಯನ್ನು ಪೊಡಿ ಮಸಾಲೆ ಜೊತೆಗೆ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಕಡಿಮೆ ಸಮಯದಲ್ಲಿ, ಚುಟುಕು ಪದಾರ್ಥಗಳಲ್ಲಿಯೇ ಬಾಯಲ್ಲಿಟರೆ ಕರಗುವ ಈ ತುಪ್ಪದ ಇಡ್ಲಿ ರೆಡಿ ಆಗುತ್ತೆ. ಇದನ್ನು ಮನೆಯಲ್ಲೇ ಸುಲಭವಾಗಿ ಮಾಡೋದು ಹೇಗೆ ಅಂತ ಗೊತ್ತಾ? ಇಲ್ಲಿದೆ
ಬೇಕಾಗುವ ಸಾಮಗ್ರಿಗಳು:
• ಇಡ್ಲಿಗಳು - 10 (ಹಬೆಯಲ್ಲಿ ಬೇಯಿಸಿದ್ದು)
• ತುಪ್ಪ - 2 ಅಥವಾ 3 ಚಮಚ
• ಕಡಲೆಕಾಯಿ - 2 ಚಮಚ
• ಕಡಲೆಬೇಳೆ - 1 ಚಮಚ
• ಉದ್ದಿನಬೇಳೆ - 1 ಚಮಚ
• ಒಣ ಕೆಂಪು ಮೆಣಸಿನಕಾಯಿ - 3
• ಎಳ್ಳು - 1 ಚಮಚ
• ಜೀರಿಗೆ - 1/2 ಚಮಚ
• ಹುಣಸೆಹಣ್ಣು - 1/4 ಚಮಚ
• ಬೆಲ್ಲ - 2 ಚಿಟಿಕೆ
• ಉಪ್ಪು - 1/4 ಚಮಚ
• ಕರಿಬೇವಿನ ಎಲೆಗಳು - ಸ್ವಲ್ಪ
• ಸಾಸಿವೆ ಕಾಳು - 1 ಚಿಟಿಕೆ
ತಯಾರಿಸುವ ವಿಧಾನ:
ಕಡಲೆಕಾಯಿ, ಬೇಳೆಕಾಳುಗಳು ಮತ್ತು ಮಸಾಲೆಗಳನ್ನು ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಬಳಿಕ ಹುರಿದ ಪದಾರ್ಥಗಳನ್ನು ನಯವಾದ ಪುಡಿಯಾಗಿ ರುಬ್ಬಿಕೊಳ್ಳಿ. ಇದಾದ ನಂತರ, ಈಗಾಗಲೇ ಬೇಯಿಸಿದ ಇಡ್ಲಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ. ಇದಾದ ಬಳಿಕ ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದಕ್ಕೆ ಸಾಸಿವೆ ಕಾಳುಗಳನ್ನು ಹಾಕಿ. ನಂತರ, ಇಡ್ಲಿ ತುಂಡುಗಳನ್ನು ಸೇರಿಸಿ, ಗರಿಗರಿಯಾಗುವವರೆಗೆ ಹುರಿಯಿರಿ. ಕೊನೆಯದಾಗಿ, ಇಡ್ಲಿ ತುಂಡುಗಳಿಗೆ ಪೊಡಿ ಮಿಶ್ರಣವನ್ನು ಬೆರೆಸಿ. ಕರಿಬೇವಿನ ಎಲೆಗಳಿಂದ ಅಲಂಕರಿಸಿ, ಬಿಸಿಯಾಗಿ ಸವಿಯಿರಿ.
ಈ ರೀತಿಯೂ ಮಾಡಬಹುದು ಮೊದಲು ಇಡ್ಲಿಗಳನ್ನು ಮಧ್ಯದಲ್ಲಿ ಕತ್ತರಿಸಿ. ಒಂದು ಇಡ್ಲಿಯಿಂದ 4 ತುಂಡುಗಳು ಆಗುವಂತೆ. ನಂತರ ಒಂದು ಜಾಡಿಯಲ್ಲಿ ತುಪ್ಪ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಜೀರಿಗೆ, ಕಾಳು ಮೆಣಸು ಹಾಕಿ. ಈಗ ಸ್ವಲ್ಪ ಉಪ್ಪು ಮತ್ತು ಪೋಡಿ ಮಸಾಲೆ ಹಾಕಿ. ತುಪ್ಪದಲ್ಲಿ ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ. ಈಗ ಕತ್ತರಿಸಿದ ಇಡ್ಲಿ ತುಂಡುಗಳನ್ನು ಹಾಕಿ. ಮಸಾಲೆ ಇಡ್ಲಿಗೆ ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿ. 5 ನಿಮಿಷ ಆಂಚಿನಲ್ಲಿ ಬಿಟ್ಟು ಬೇಯಿಸಿ, ಎಲ್ಲಾ ಇಡ್ಲಿಗೆ ಪುಡಿ ತೇವ ಬಂದರೆ ಗ್ಯಾಸ ಆಫ್ ಮಾಡಿ. ಮೇಲಿಂದ ಮತ್ತೊಂದು ಚಿಟಿಕೆ ತುಪ್ಪ ಹಾಕಿದ್ರೆ, ಸ್ವಾದ ಎರಡರಷ್ಟು.
ಈ ತುಪ್ಪದ ಪೋಡಿ ಇಡ್ಲಿ ಟಿಫನ್ ಬಾಕ್ಸಿಗೆ ಪರ್ಫೆಕ್ಟ್, ಟೀ ಟೈಂ ಸ್ನ್ಯಾಕ್ ಆಗಿರಬಹುದು, ಇಲ್ಲವೆ ಸಂಜೆಗೂ ಬಾಯಲ್ಲಿ ನೀರೂರಿಸುವ ರೆಸಿಪಿ. ಎಷ್ಟೋ ಮಂದಿ ಹೋಟೆಲ್ನಲ್ಲಿ ಮಾತ್ರ ತಿಂದಿದ್ದೀರಿ. ಈಗ ಮನೆಯಲ್ಲೇ ಮಾಡಿ ನೋಡಿ. ಬಾಯಲ್ಲಿ ಕರಗುವ ಈ ಇಡ್ಲಿ ನಿಮಗಿಷ್ಟವಾದರೆ, ಬೇರೆಯವರಿಗೂ ತಿಳಿಸಿ. ಈ ಇಡ್ಲಿ ಯಾವುದೇ ಸಮಯದಲ್ಲಿ ಹಸಿವನ್ನು ನೀಗಿಸಲು ಉತ್ತಮ ಆಯ್ಕೆಯಾಗಿದೆ.