ನೆಲ್ಲಿಕಾಯಿ ರಸಂ ಕುಡಿಯಿರಿ ಸಾಕು. ಮಳೆಗಾಲದಲ್ಲಿ ಶೀತ, ಕೆಮ್ಮು ದೂರ!

ಮಳೆಗಾಲದಲ್ಲಿ ಸಾಮನ್ಯವಾಗಿ ಪದೇ ಪದೆ ಶೀತ ಹಾಗೂ ಕೆಮ್ಮ ಬರುವುದು  ಸಾಮಾನ್ಯ. ಆದರೆ, ಮನೆಯಲ್ಲಿರುವ ಸಾಮಾನ್ಯ ರಸಂಗಳನ್ನು ಹೊರತುಪಡಿಸಿ, ರುಚಿಕರ ಮತ್ತು ಆರೋಗ್ಯಕರ ನೆಲ್ಲಿಕಾಯಿ ರಸಂ ಮಾಡಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದನ್ನು ತಯಾರಿಸುವುದು ತುಂಬಾ ಸುಲಭ ಮತ್ತು ಒಮ್ಮೆ ತಿಂದರೆ ಮತ್ತೆ ಮತ್ತೆ ಕೇಳುವಷ್ಟು ರುಚಿಯಾಗಿರುತ್ತದೆ.

ಸಾಮಾನ್ಯವಾಗಿ ಎಲ್ಲರೂ ಒಂದೇ ರೀತಿಯ ರಸಂ ಮಾಡುತ್ತಾರೆ. ಆದರೆ, ಈ ನೆಲ್ಲಿಕಾಯಿ ರಸಂ, ರುಚಿ ಮತ್ತು ಆರೋಗ್ಯ ಎರಡನ್ನೂ ಒದಗಿಸುತ್ತದೆ. ಹೌದು, ಮಳೆಗಾಲದಲ್ಲಿ ನೆಲ್ಲಿಕಾಯಿ ರಸಂ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ರುಚಿಕರ ಮಾತ್ರವಲ್ಲದೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನೂ ನೀಡುತ್ತದೆ. ಸಾಮಾನ್ಯ ರಸಂ ಪದಾರ್ಥಗಳಿಂದ ಭಿನ್ನವಾಗಿ, ನೆಲ್ಲಿಕಾಯಿ ಬಳಸಿ ತಯಾರಿಸುವ ಈ ರಸಂ ಸದ್ಯದ ಹವಾಮಾನದಲ್ಲಿ ಸಾಮಾನ್ಯವಾದ ಶೀತ ಮತ್ತು ಕೆಮ್ಮು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಈ ರಸಂ ತಯಾರಿಸುವ ವಿಧಾನ ಇಲ್ಲಿದೆ.

ನೆಲ್ಲಿಕಾಯಿ ರಸಂಗೆ ಬೇಕಾಗುವ ಸಾಮಗ್ರಿಗಳು

ಬೇಯಿಸಲು

• ತೊಗರಿಬೇಳೆ - 3 ಸ್ಪೂನ್

• ಅರಿಶಿನ ಪುಡಿ - 1/4 ಸ್ಪೂನ್

• ಇಂಗು - 1/4 ಸ್ಪೂನ್

• ನೀರು - 1 1/4 ಕಪ್

ರುಬ್ಬಲು 

• ಮೆಣಸು - 1 ಸ್ಪೂನ್

• ಜೀರಿಗೆ - 1 ಸ್ಪೂನ್

• ಬೆಳ್ಳುಳ್ಳಿ - 6-7 ಎಸಳು

• ಹಸಿಮೆಣಸಿನಕಾಯಿ - 2

• ಕರಿಬೇವಿನ ಎಲೆಗಳು - ಸ್ವಲ್ಪ ಇತರೆ ಸಾಮಗ್ರಿಗಳು

• ದೊಡ್ಡ ನೆಲ್ಲಿಕಾಯಿ - 3

• ಟೊಮೆಟೊ - 1 (ಸಣ್ಣಗೆ ಕತ್ತರಿಸಿದ್ದು)

• ಕೊತ್ತಂಬರಿ ಸೊಪ್ಪು - ಸ್ವಲ್ಪ

• ಉಪ್ಪು - ರುಚಿಗೆ ತಕ್ಕಷ್ಟು

• ನೀರು - ಅಗತ್ಯಕ್ಕೆ ತಕ್ಕಷ್ಟು ಒಗ್ಗರಣೆಗೆ

• ಎಣ್ಣೆ - 2 ಸ್ಪೂನ್

• ಸಾಸಿವೆ - 1 ಸ್ಪೂನ್

• ಕರಿಬೇವಿನ ಎಲೆಗಳು

• ಒಣಮೆಣಸಿನಕಾಯಿ - 2

• ಕೊತ್ತಂಬರಿ ಸೊಪ್ಪು - ಸ್ವಲ್ಪ

• ನಿಂಬೆ - ಅರ್ಧ

ತಯಾರಿಸುವ ವಿಧಾನ:
ಮೊದಲು ತೊಗರಿಬೇಳೆಯನ್ನು ತೊಳೆದು ಕುಕ್ಕರ್‌ನಲ್ಲಿ ಹಾಕಿ. ಅದಕ್ಕೆ ಅರಿಶಿನ ಪುಡಿ, ಇಂಗು ಮತ್ತು ನೀರು ಹಾಕಿ, 4-5 ಸೀಟಿ ಬರುವವರೆಗೆ ಬೇಯಿಸಿ. ಸೀಟಿ ಕಡಿಮೆಯಾದ ನಂತರ ಕುಕ್ಕರ್ ತೆರೆದು ಬೇಳೆಯನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ನಂತರ ಮಿಕ್ಸರ್ ಜಾರ್‌ನಲ್ಲಿ ಮೆಣಸು, ಜೀರಿಗೆ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೈಗಳಿಂದ ಚೆನ್ನಾಗಿ ಕಲಸಿಕೊಳ್ಳಿ.

ಈ ಮಿಶ್ರಣಕ್ಕೆ ರುಬ್ಬಿದ ಮೆಣಸು ಪೇಸ್ಟ್ ಮತ್ತು ಬೇಳೆ ಬೇಯಿಸಿದ ನೀರನ್ನು ಮಾತ್ರ ಸೇರಿಸಿ ಚೆನ್ನಾಗಿ ಕಲಸಿ. ನಂತರ ಮಿಕ್ಸರ್ ಜಾರ್‌ನಲ್ಲಿ ನೆಲ್ಲಿಕಾಯಿ ತುಂಡುಗಳನ್ನು ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದುಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಸಾಸಿವೆ, ಕರಿಬೇವಿನ ಎಲೆಗಳು ಮತ್ತು ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಕಲಸಿಟ್ಟ ಟೊಮೆಟೊ ಮಿಶ್ರಣವನ್ನು ಹಾಕಿ, ಹೆಚ್ಚುವರಿಯಾಗಿ 1/2 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ.

ಕುದಿ ಬಂದ ನಂತರ, ಬೇಯಿಸಿದ ಬೇಳೆಗೆ ಸ್ವಲ್ಪ ನೀರು ಸೇರಿಸಿ ಮಸೆದು, ಮಿಶ್ರಣಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಅಗತ್ಯವಿದ್ದರೆ ಮತ್ತಷ್ಟು ಉಪ್ಪು ಸೇರಿಸಿ. ರಸಂ ನೊರೆ ಬಂದ ನಂತರ, ಕೊತ್ತಂಬರಿ ಸೊಪ್ಪು ಮತ್ತು ಅರೆದ ನೆಲ್ಲಿಕಾಯಿ ಪೇಸ್ಟ್ ಸೇರಿಸಿ ಕಲಸಿ, ಒಲೆ ಆಫ್ ಮಾಡಿ. ಕೊನೆಯಲ್ಲಿ ರಸಂ ತಣ್ಣಗಾದ ನಂತರ ನಿಂಬೆ ರಸ ಸೇರಿಸಿ ಕಲಸಿದರೆ, ರುಚಿಕರವಾದ ನೆಲ್ಲಿಕಾಯಿ ರಸಂ ಸಿದ್ಧ.