ಗರ್ಭಾವಸ್ಥೆ:
ಗರ್ಭಾವಸ್ಥೆಯ ಪ್ರತಿ ಹಂತದಲ್ಲಿಯೂ ಗರ್ಭವತಿಯ ದೇಹದಲ್ಲಿ ನೂರಾರು ಬಗೆಯ ರಸದೂತಗಳ ಪ್ರಭಾವ ಎದುರಾಗುತ್ತದೆ. ಪರಿಣಾಮವಾಗಿ ದೇಹದಲ್ಲಿ ಕೆಲವಾರು ಬದಲಾವಣೆಗಳು ಕಂಡುಬರುತ್ತವೆ. ದೈಹಿಕ ಬದಲಾವಣೆಯ ಜೊತೆಗೇ ಮಾನಸಿಕವಾಗಿಯೂ ಈ ರಸದೂತಗಳು ಪ್ರಭಾವ ಬೀರುವ ಕಾರಣ ಮನೋಭಾವದಲ್ಲಿಯೂ ಏರು ಪೇರು ಕಾಣಿಸಿಕೊಳ್ಳುತ್ತದೆ. ತ್ವಚೆ, ಕೂದಲು, ಮೈಕಾಂತಿ ಎಲ್ಲವೂ ಬೆಳಗುತ್ತವೆ. ಪ್ರತಿ ಗರ್ಭವತಿಗೂ ತ್ವಚೆಗೆ ಸಂಬಂಧಿಸಿದ ಒಂದಲ್ಲಾ ಒಂದು ತೊಂದರೆ ಎದುರಾಗಿಯೇ ಇರುತ್ತದೆ. ಒಂದು ವೇಳೆ ಗರ್ಭಾವಸ್ಥೆಗೂ ಮುನ್ನ ಆಕೆಗೆ ಯಾವುದಾದರೂ ತ್ವಚೆಗೆ ಸಂಬಂಧಿಸಿದ ತೊಂದರೆ ಇದ್ದರೆ ಗರ್ಭಾವಸ್ಥೆಯಲ್ಲಿ ಇದು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು. ಆದರೆ ಹೆಚ್ಚಿನ ಗರ್ಭವತಿಯರಲ್ಲಿ ಈ ಸಮಯದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ತ್ವಚೆಗೆ ಸಂಬಂಧಿಸಿದ ತೊಂದರೆಗಳು ಸಾಮಾನ್ಯವಾಗಿದೆ ಹಾಗೂ ಗರ್ಭಾವಸ್ಥೆಯ ಮುಂದಿನ ದಿನಗಳಲ್ಲಿ ಮತ್ತು ಬಾಣಂತನದ ಅವಧಿಯಲ್ಲಿ ತನ್ನಿಂತಾನೇ ಇಲ್ಲವಾಗುತ್ತವೆ.
ಬಹುತೇಕ ಎಲ್ಲಾ ಗರ್ಭವತಿಯರಲ್ಲಿ ಕಾಣಿಸಿಕೊಳ್ಳುವ ಅತಿ ಸಾಮಾನ್ಯ ತ್ವಚೆಗೆ ಸಂಬಂಧಿಸಿದ ತೊಂದರೆ ಎಂದರೆ ಸ್ತನತೊಟ್ಟುಗಳ ತುರಿಕೆ. ಇದಕ್ಕೆ ಪ್ರಮುಖ ಕಾರಣ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಅನುಗುಣವಾಗಿ ಗರ್ಭವತಿಯ ದೇಹ ಹಿಗ್ಗುತ್ತಿದ್ದಂತೆಯೇ ಇದಕ್ಕೆ ಅನುಸಾರವಾಗಿ ಚರ್ಮವೂ ಸೆಳೆತಕ್ಕೊಳಗಾಗುತ್ತದೆ. ಹೊಟ್ಟೆಯ ಭಾಗದ ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯಲ್ಪಡುವ ಗುರುತುಗಳು ಇದರಲ್ಲಿ ಪ್ರಮುಖವಾಗಿವೆ. ಈ ಸೆಳೆತದ ಗುರುತುಗಳು ದೇಹದ ಇತರ ಭಾಗದಲ್ಲಿಯೂ ಸೂಕ್ಷ್ಮಗೀರುಗಳು ಅಥವಾ ಪಟ್ಟೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಈ ಗುರುತುಗಳು ಸಹಜವರ್ಣ ಗಾಢ ಮತ್ತು ತಿಳಿಯಾದಂತಹ ಪಟ್ಟೆ ಪಟ್ಟೆಯಂತಿರುತ್ತವೆ ಹಾಗೂ ತ್ವಚೆ ಹೆಚ್ಚು ಹೆಚ್ಚು ಸೆಳೆತ ಪಡೆದಷ್ಟೂ ಈ ತಿಳಿಭಾಗ ಇನ್ನಷ್ಟು ಹೆಚ್ಚು ಹೆಚ್ಚಾಗಿ ತಿಳಿಯಾಗುತ್ತಾ ಮತ್ತು ವಿಸ್ತಾರವಾಗುತ್ತಾ ಹೋಗುತ್ತದೆ.
ಈ ಸೆಳೆತ ಸ್ತನಗಳ ತ್ವಚೆಯಲ್ಲಿಯೂ ಕಾಣಿಸಿಕೊಳ್ಳಬಹುದು ಹಾಗೂ ಸ್ತನತೊಟ್ಟುಗಳನ್ನೂ ಸೆಳೆತಕ್ಕೊಳಗಾಗಿಸುತ್ತವೆ. ಸ್ತನದ ಇತರ ಭಾಗದ ಚರ್ಮಕ್ಕಿಂತಲೂ ಸ್ತನತೊಟ್ಟುಗಳ ಚರ್ಮ ಹೆಚ್ಚು ಸಂವೇದಿಯಾಗಿರುವ ಕಾರಣ ಇಲ್ಲಿ ಸ್ವಾಭಾವಿಕವಾಗಿಯೇ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ನಿಜವಾಗಿ ನೋಡಬೇಕೆಂದರೆ ತುರಿಕೆಯಲ್ಲ, ಬದಲಿಗೆ ಚರ್ಮದ ಸಂವೇದನೆ ಹೆಚ್ಚುವ ಮೂಲಕ ಮೆದುಳಿನ ಗಮನ ಇತ್ತ ಸೆಳೆಯುವುದು ತುರಿಕೆಯಂತೆ ತೋರುತ್ತದೆ. ಈ ಭಾಗಕ್ಕೆ ಕೊಂಚ ತೇವಕಾರಕ (ಮಾಯಿಶ್ಚರೈಸರ್) ಹಚ್ಚಿಕೊಂಡರೆ ಸಾಕು, ಈ ಸಂವೇದನೆ ಕೊಂಚ ಶಮನಗೊಳ್ಳುವ ಕಾರಣ ತುರಿಕೆ ಇಲ್ಲವಾಗುತ್ತದೆ. ಸಾಮಾನ್ಯವಾಗಿ ಈ ತುರಿಕೆ ಗರ್ಭಾವಸ್ಥೆಯ ಎಲ್ಲಾ ದಿನಗಳಲ್ಲೂ ಎದುರಾದರೂ ಎರಡನೆಯ ತ್ರೈಮಾಸಿಕದಲ್ಲಿ ಗರಿಷ್ಟ ಇರುತ್ತದೆ.
ಸ್ತನಪಾನ:
ಇನ್ನೊಂದು ಕಾರಣ ಮಗುವಿಗೆ ಹಾಲೂಡಿಸುವ ಮೂಲಕ ಎದುರಾಗುವ ತುರಿಕೆಯಾಗಿದೆ. ಕೆಲವೊಮ್ಮೆ ಹುಟ್ಟಿದ ಮಗು ಹಾಲು ಕುಡಿಯುವ ಪ್ರಯತ್ನದಲ್ಲಿಯೂ ಈ ಸಂವೇದನೆ ಹೆಚ್ಚುವ ಮೂಲಕ ತುರಿಕೆ ಎನಿಸಬಹುದು. ಕೆಲವೊಮ್ಮೆ ಊದಿಕೊಂಡ ಹಾಲಿನ ಗ್ರಂಥಿಗಳು ಅಥವಾ ಎದೆಹಾಲು ತೊಟ್ಟಿನಿಂದ ಹೊರಬಿದ್ದು ಸ್ತನತೊಟ್ಟಿನ ಭಾಗದಲ್ಲಿ ತಾಕಿದ್ದು ಕೊಂಚ ಹೊತ್ತಿನ ಬಳಿಕ ಒಣಗಿದರೆ ಇದೂ ತುರಿಕೆಗೆ ಕಾರಣವಾಗಬಹುದು. ಸ್ವಚ್ಛತೆಯನ್ನು ಕಾಪಾಡುವ ಮೂಲಕ ಈ ತುರಿಕೆಯನ್ನು ಆದಷ್ಟೂ ಇಲ್ಲವಾಗಿಸಬಹುದು. ಹಾಲಿನ ಗ್ರಂಥಿಗಳ ಊದಿಕೊಳ್ಳುವಿಕೆ ಇದಕ್ಕೆ ಕಾರಣವಾಗಿದ್ದರೆ ಫ್ರಿಜ್ಜಿನಲ್ಲಿರಿಸಿ ತಣ್ಣಗಾಗಿಸಿದ ಸಿಲಿಕೋನ್ ಜೆಲ್ ಪ್ಯಾಡ್ ಗಳನ್ನು ಕಂಚುಕದ ಒಳಗಿರಿಸಿ ತೊಟ್ಟುಕೊಳ್ಳುವುದರಿಂದ ಶಮನ ಪಡೆಯಬಹುದು. ಅಥವಾ ಲ್ಯಾನೋಲಿನ್ ಮುಲಾಮು ಹೆಚ್ಚಿಕೊಳ್ಳುವುದರಿಂದಲೂ ಶಮನ ಪಡೆಯಬಹುದು.
ಕ್ಯಾಂಡಿಡೈಯಾಸಿಸ್:
ಇದೊಂದು ಬಗೆಯ ಶಿಲೀಂಧ್ರದ ಸೋಂಕು ಆಗಿದೆ ಹಾಗೂ ಸ್ತನಪಾನ ಮಾಡಿಸುವ ತಾಯಂದಿರಿಗೆ ಅತಿ ಹೆಚ್ಚಾಗಿ ಬಾಧಿಸುತ್ತದೆ. ಸ್ತನತೊಟ್ಟು ಮತ್ತು ಹಾಲು ಒಸರುವ ತೂತಿನ ಭಾಗದಲ್ಲಿ ಈ ಶಿಲೀಂಧ್ರದ ಸೋಂಕು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಭಾಗದಲ್ಲಿ ಚಿಕ್ಕದಾಗಿ ಹೊಳಪುಳ್ಳ ಪಕಳೆ ಎದ್ದಂತೆ ಚರ್ಮದ ಹೊರಪದರ ಒಣಗುತ್ತದೆ. ಅಲ್ಲದೇ ಹಾಲು ಕುಡಿಸುವಾಗ ತುರಿಕೆಯ ಜೊತೆಗೇ ಚಿಕ್ಕದಾಗಿ ಉರಿಯುವಂತೆಯೂ ಅನ್ನಿಸುತ್ತದೆ. ಸ್ತನತೊಟ್ಟಿನ ತುದಿಭಾಗದಿಂದ ಬುಡದವರೆಗೂ ಚಿಕ್ಕ ಚಿಕ್ಕ ಕೆಂಪಗಿನ ಗುಳ್ಳೆಗಳು ಕಾಣಿಸಿಕೊಂಡು ಅಪಾರ ಉರಿ ತರಿಸಬಹುದು. ತಕ್ಷಣವೇ ಚರ್ಮ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.
ಅಲರ್ಜಿ:
ಕೆಲವು ವಸ್ತುಗಳಿಗೆ ಇರುವ ಅಲರ್ಜಿ ಸ್ತನತೊಟ್ಟುಗಳ ಭಾಗದಲ್ಲಿ ಹೆಚ್ಚಾಗಿ ಪ್ರಕಟಗೊಳ್ಳಬಹುದು. ಈ ಸ್ಥಿತಿಗೆ ಎಂದು ಕರೆಯುತ್ತಾರೆ. ಅಂದರೆ ದೇಹದ ಯಾವುದೇ ಭಾಗದಲ್ಲಿ ನಿಮಗೆ ಅಲರ್ಜಿ ಉಂಟುಮಾಡುವ ಅಲರ್ಜಿಕಾರಕ ಕಣಗಳು ಸ್ಪರ್ಶಿಸಿದರೂ ಇದರ ಪರಿಣಾಮವನ್ನು ದೇಹದ ಅತಿ ಹೆಚ್ಚು ಸಂವೇದನೆ ಇರುವ ಭಾಗದ ಚರ್ಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಚರ್ಮದಲ್ಲಿ ತುರಿಕೆ, ಕೆಂಪಗಾಗುವುದು ಹಾಗೂ ಬಣ್ಣ ಬದಲಾಗುವುದು ಕಾಣಿಸಿಕೊಳ್ಳಬಹುದು. ಈ ಅಲರ್ಜಿಕಾರಕ ಯಾವುದು ಎಂದು ಕಂಡು ಹಿಡಿಯುವುದೇ ದುಸ್ತರವಾದ ಕೆಲಸ. ಆದಾಗ್ಯೂ ಈ ತುರಿಕೆ ಎದುರಾದ ಹಿಂದಿನ ದಿನ ಹೊಸ ಒಳವಸ್ತ್ರಗಳನ್ನೇನಾದರೂ ಧರಿಸಿದ್ದರೆ ಈ ವಸ್ತ್ರಗಳಿಗೆ ಅಂಟಿಕೊಂಡಿದ್ದ ಯಾವುದೋ ಕಣ ನಿಮ್ಮ ಅಲರ್ಜಿಯನ್ನು ಭುಗಿಲೆಬ್ಬಿಸಿರಬಹುದು. ಈ ಬಟ್ಟೆಯ ಸಾಮಾಗ್ರಿ, ಅಥವಾ ಬಣ್ಣ, ಅಂಟಿಕೊಂಡ ಪುಡಿ ಯಾವುದೂ ಇದಕ್ಕೆ ಕಾರಣವಾಗಿರಬಹುದು. ಒಂದು ವೇಳೆ ನಿಮ್ಮ ಹೊಸ ಕಂಚುಕ ಧರಿಸಿದ ಬಳಿಕ ತುರಿಕೆ ಪ್ರಾರಂಭವಾಗಿದೆ ಎಂದು ನಿಮಗೆ ಸ್ಪಷ್ಟವಾದರೆ ತಕ್ಷಣವೇ ಈ ಕಂಚುಕವನ್ನು ಕೆಲವು ದಿನಗಳವರೆಗಾದರೂ ಧರಿಸಬಾರದು. ಅಲ್ಲದೇ ಹೊಸ ವಸ್ತ್ರಗಳನ್ನು ಕೊಂಡರೂ ಒಗೆದು ಇಸ್ತ್ರಿ ಮಾಡದೇ ಧರಿಸಬಾರದು. ಸಾಮಾನ್ಯವಾಗಿ ಈ ಪರಿಯ ತುರಿಕೆಗೆ ವಿಶೇಷವಾದ ಆರೈಕೆ ಬೇಕಾಗಿಲ್ಲ, ಕೆಲವೇ ದಿನಗಳಲ್ಲಿ ಇದು ಇಲ್ಲವಾಗುತ್ತದೆ.
ರಜೋನಿವೃತ್ತಿ:
ರಜೋನಿವೃತ್ತಿಯ ದಿನಗಳಲ್ಲಿರುವ ಮಹಿಳೆಯರ ತ್ವಚೆ ಹೆಚ್ಚು ಒಣದಾಗಿರುತ್ತದೆ ಹಾಗೂ ಸುಲಭವಾಗಿ ತುರಿಕೆಗೆ ಒಳಗಾಗುತ್ತದೆ. ದೇಹದ ರಸದೂತಗಳ ಏರುಪೇರಿನ ಜೊತೆಗೇ ತ್ವಚೆಯಲ್ಲಿ ಉತ್ಪತ್ತಿಯಾಗುವ ನೈಸರ್ಗಿಕ ತೈಲಗಳೂ ಕಡಿಮೆ ಉತ್ಪತ್ತಿಯಾಗುವ ಕಾರಣ ದೇಹದ ಎಲ್ಲಾ ಭಾಗದಲ್ಲಿಯೂ ತುರಿಕೆ ಕಾಣಿಸಿಕೊಂಡರೂ ಸಸೂಕ್ಷ್ಮ ಭಾಗಗಳಾದ ಸ್ತನತೊಟ್ಟು ಮತ್ತು ತೊಡೆಸಂಧುಗಳಲ್ಲಿ ತುರಿಕೆ ಹೆಚ್ಚುತ್ತದೆ.
ಕ್ಯಾನ್ಸರ್‌ಗೆ ಚಿಕಿತ್ಸೆ:
ವಿವಿಧ ಕ್ಯಾನ್ಸರ್ ಗಳಿಗೆ ನೀಡಲಾಗುವ ಚಿಕಿತ್ಸೆಯಿಂದಲೂ ತುರಿಕೆ ಎದುರಾಗಬಹುದು. ರೇಡಿಯೇಶನ್ ಥೆರಪಿ ಯಿಂದ ಚರ್ಮ ಅತೀವವಾಗಿ ಒಣಗುತ್ತದೆ ಹಾಗೂ ತುರಿಕೆ ಅವ್ಯಾಹತವಾಗುತ್ತದೆ. ಅಲ್ಲದೇ ಖೀಮೋಥೆರಪಿಯಲ್ಲಿ ನೀಡಲಾಗುವ ಆಲ್ಕಲಾಯ್ಡುಗಳು ಮತ್ತು ಆಂಟಿ ಮೆಟಾಬೊಲೈಟುಗಳು ಮೊದಲಾದ ಔಷಧಿಗಳು ತೀವ್ರ ತುರಿಕೆ ಅಥವಾ ಎಂಬ ಸ್ಥಿತಿಗೆ ಕಾರಣವಾಗುತ್ತವೆ.
ಸ್ತನದ ಪ್ಯಾಗೆಟ್ ಕಾಯಿಲೆ:
ಇದೊಂದು ಅಪರೂಪದ ಕಾಯಿಲೆಯಾಗಿದ್ದು ಸ್ತನ ಕ್ಯಾನ್ಸರ್ ನ ಒಂದು ವಿಧವಾಗಿದೆ. ಪರಿಣಾಮವಾಗಿ ಸ್ತನದ ಮೇಲೆ ಎಕ್ಸಿಮಾ ನಂತಹ ಗುರುತುಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಲಕ್ಷಣವನ್ನು ಕಂಡ ವೈದ್ಯರು ಎಕ್ಸಿಮಾ ಅಥವಾ ಡರ್ಮಿಟೈಟಿಸ್ ಎಂಬ ಕಾಯಿಲೆಗಳು ಇರಬಹುದೆಂದೇ ಮೊದಲಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚು. ಈ ತೊಂದರೆ ಸ್ತನ ಕ್ಯಾನ್ಸರ್ ಎದುರಾಗಿರುವ ಮಹಿಳೆಯರಲ್ಲಿ ಕೇವಲ ಒಂದರಿಂದ ನಾಲ್ಕು ಶೇಖಡಾದಷ್ಟು ಮಹಿಳೆಯರಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿ ಎದುರಾದರೆ ಸ್ತನತೊಟ್ಟಿನ ತುದಿಭಾಗ ಒಳಗೆ ಸೆಳೆಯಲ್ಪಡುತ್ತದೆ ಹಾಗೂ ಸತತ ತುರಿಕೆ, ಚಿಕ್ಕದಾಗಿ ಸೂಜಿ ಚುಚ್ಚಿದಂತಹ ಅನುಭವ, ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇವುಗಳ ಹೊರತಾಗಿ ಸ್ತನತೊಟ್ಟುಗಳ ತುರಿಕೆ ಬೇರೆ ಕಾರಣಗಳಿಂದಲೂ ಎದುರಾಗಿರಬಹುದು.
ಇದುವರೆಗೆ ಪ್ರಕಟಗೊಳ್ಳದೇ ಇರುವ ಯಾವುದಾದರೂ ಕಾಯಿಲೆಯ ಕಾರಣವೂ ಇರಬಹುದು ಅಥವಾ ಕೆಲವು ಔಷಧಿಗಳ ಅಡ್ಡಪರಿಣಾಮವೂ ಇರಬಹುದು. ಹಾಗಾಗಿ, ತುರಿಕೆ ಎದುರಾದರೆ ನಿರ್ಲಕ್ಷಿಸದೇ ತಕ್ಷಣ ಚರ್ಮವೈದ್ಯರಲ್ಲಿ ತಪಾಸಣೆಗೊಳಪಡಬೇಕು ಹಾಗೂ ಇದರ ಕಾರಣವನ್ನು ಅರಿತು ಸೂಕ್ತ ಚಿಕಿತ್ಸೆಯನ್ನು ಆದಷ್ಟೂ ಬೇಗನೇ ಪಡೆದುಕೊಳ್ಳಬೇಕು.
