ನೀವು ಕೂಡ ಅಂಗಡಿ, ಬೇಕರಿಯಿಂದ ಖರೀದಿಸಿ ತಂದು ಪೇಡ ಸವಿದಿರುತ್ತೀರಿ. ರುಚಿ ರುಚಿಯ ಪೇಡದ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲಿ ನೀರು ಬರುತ್ತಿರಬಹುದು. ಹಾಗೆ ಪೇಡ ಅಂದ್ರೆ ಎಲ್ಲರು ಇಷ್ಟಪಡುತ್ತಾರೆ. ಮಾಡೋದು ಕೂಡ ಬಹಳ ಸುಲಭ. ಇನ್ನು ಈ ಪೇಡದಲ್ಲಿ ಹತ್ತು ಹಲವು ಬಗೆಗಳಿವೆ. ಹಬ್ಬದ ಸಮಯದಲ್ಲಿ ಯಾವುದಾದರೊಂದು ಬಗೆ ಮಾಡಿದ್ರೆ ಹಬ್ಬದ ಸಂಭ್ರಮ ಡಬಲ್ ಆಗೋದು ಖಚಿತ.
ಆದರೆ ನಾವಿಂದು ಹಾಲಿನಿಂದ ಮಾಡುವಂತಹ ಸುಲಭದ ಪೇಡ ಕುರಿತಾಗಿ ತಿಳಿಯೋಣ. ಈ ಪೇಡ ಮಾಡಲು ಕೆಲವೇ ವಸ್ತು ನಿಮ್ಮ ಬಳಿ ಇದ್ದರೆ ಸಾಕು. ಈ ಹಾಲಿನ ಪೇಡ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿಯೋಣ.
ಮೊದಲು ಒಂದು ಮಿಕ್ಸಿ ಜಾರ್ಗೆ ಅರ್ಧ ಕಪ್ ಸಕ್ಕರೆ, ಏಲಕ್ಕಿ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ಈಗ ಒಂದು ಬೌಲ್ಗೆ ಹಾಲಿ ಪುಡಿ ಹಾಕಿಕೊಳ್ಳಿ. 1 ಕಪ್ ಹಾಲಿನ ಪುಡಿಗೆ ಕಾಲು ಕಪ್ ಹಾಲು ಹಾಕಿಕೊಂಡು ಮಿಕ್ಸ್ ಮಾಡಬೇಕು. ಬಿಸಿ ಮಾಡಿ ತಣ್ಣಗೆ ಮಾಡಿರುವ ಹಾಲನ್ನು ಹಾಕಿ ಗಂಟುಗಳಿಲ್ಲದಂತೆ ಮಿಕ್ಸ್ ಮಾಡಿ. ಇದು ದಪ್ಪ ಹಿಟ್ಟಿನಂತೆ ಬರಬೇಕು, ನಂತರ ಇದನ್ನು ಬದಿಗಿಟ್ಟುಕೊಳ್ಳಿ. ಈಗ ಒಂದು ಬಾಣಲೆ ಇಟ್ಟು ಅದಕ್ಕೆ 2 ಸ್ಪೂನ್ ತುಪ್ಪ ಹಾಕಿ ನಂತರ ಇದಕ್ಕೆ ಹಾಲಿನ ಪುಡಿಯ ಮಿಶ್ರಣವನ್ನು ಹಾಕಿಕೊಂಡು ಮಿಕ್ಸ್ ಮಾಡುತ್ತಾ ಬರಬೇಕು.
ತುಪ್ಪದೊಂದಿಗೆ ಈ ಮಿಶ್ರಣ ಚೆನ್ನಾಗಿ ಮಿಕ್ಸ್ ಆಗಬೇಕು. ಈಗ ಮೊದಲು ರುಬ್ಬಿದ ಸಕ್ಕರೆ ಪುಡಿಯನ್ನು ಸಹ ಇದಕ್ಕೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು. ಕೈಬಿಡದೆ ಚೆನ್ನಾಗಿ ಮಿಶ್ರಣ ಮಾಡುತ್ತಾ ಇರಿ. ಇದು ಗಟ್ಟಿ ಆಗುವವರೆಗೂ ಮಿಶ್ರಣ ಮಾಡುತ್ತಿರಬೇಕು ಅದರ ನಡುವೆ ಅರ್ಧ ಸ್ಪೂನ್ ತುಪ್ಪ ಸಹ ಹಾಕಿಕೊಳ್ಳಿ. 3 ನಿಮಿಷದ ಬಳಿಕ ಇದು ತಳ ಬಿಡಲು ಆರಂಭಿಸಲಿದೆ. ಈಗ ಒಲೆ ಆಫ್ ಮಾಡಿಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಿ.
ಈಗ ತಟ್ಟೆಯಲ್ಲಿರುವ ಹಿಟ್ಟು 2 ನಿಮಿಷ ಬಿಟ್ಟು ಅದನ್ನು ಉಂಡೆ ಕಟ್ಟಿಕೊಳ್ಳಿ. ಉಗುರು ಬೆಚ್ಚಗೆ ಇದ್ದಾಗ ನಿಂಬೆ ಹಣ್ಣು ಗಾತ್ರದಲ್ಲಿ ಅದನ್ನು ಉಂಡೆ ಕಟ್ಟಿಕೊಂಡು ನಂತರ ಅದನ್ನು ಪೇಡಾದ ರಚನೆಗೆ ತಟ್ಟಿಕೊಳ್ಳಿ. ಎಲ್ಲವು ಒಂದೇ ಗಾತ್ರದಲ್ಲಿ ತಟ್ಟಿಕೊಂಡು ಕಡ್ಡಿಯಿಂದ ಅದರ ಮೇಲೆ ಡಿಸೈನ್ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಹಾಗೆ ನೀಡಬಹುದು. ಇಷ್ಟಾದರೆ ರುಚಿ ರುಚಿಯ ಪೇಡ ಸಿದ್ದವಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ಸವಿದು ನೋಡಿ. ನೀವು ಸಹ ಮನೆಯಲ್ಲಿ ಅದ್ರಲ್ಲೂ ಹಬ್ಬದ ಸಮಯದಲ್ಲಿ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ನಿಮ್ಮ ಬಾಯಲ್ಲೂ ಇದು ನೀರು ತರಿಸಲಿದೆ.
