ಜೋಳದ ಅಂಬಲಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ?

ನೀವು ದೇಹಕ್ಕೆ ಶಕ್ತಿ ನೀಡುವಂತಹ ಹಲವು ಖಾದ್ಯಗಳ ಮಾಡಿ ಸವಿಯೋದನ್ನು ಅಭ್ಯಾಸ ಮಾಡಿಕೊಂಡಿರಬಹುದು. ನಿತ್ಯ ಸೇವಿಸುವ ತಿಂಡಿ, ಊಟ, ಮಸಾಲೆ ಭರಿತ ಖಾದ್ಯಗಳು, ಮಾಂಸ ಇದೆಲ್ಲದರ ನಡುವೆ ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಹಾಗೆ ಸಮತೋಲನ ಕಾಪಾಡುವಂತಹ ಖಾದ್ಯಗಳು ಕೂಡ ಅಗತ್ಯವಾಗಿ ಬೇಕಾಗುತ್ತದೆ.

ಇಂತಹ ಖಾದ್ಯಗಳಲ್ಲಿ ಸಾಂಪ್ರದಾಯಿಕ ಶೈಲಿಯ ಅಡುಗೆ ಅಥವಾ ಖಾದ್ಯಗಳು ಯಾವಾಗಲು ನಿಮಗೆ ಸಹಾಯ ಮಾಡುತ್ತವೆ, ಇವು ನಿಮ್ಮ ದೇಹವನ್ನು ಸಮತೋಲನದಲ್ಲಿಡುವುದು, ಶಕ್ತಿ ನೀಡುವ ಜೊತೆಗೆ ನಿಮಗೆ ಬಲ ನೀಡುವ ಖಾದ್ಯಗಳಾಗಿವೆ. ಅದ್ರಲ್ಲೂ ವಿವಿಧ ವಸ್ತುಗಳಿಂದ ಮಾಡಲ್ಪಡುವ ಅಂಬಲಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ.

ಅಂಬಲಿಗಳಲ್ಲಿ ಹತ್ತು ಹಲವು ರೀತಿಯ ಅಂಬಲಿ ನೀವು ಸೇವಿಸಿರಬಹುದು. ಅದ್ರಲ್ಲಿ ಮುಖ್ಯವಾಗಿ ರಾಗಿ ಅಂಬಲಿ ಎಲ್ಲರಿಗೂ ಇಷ್ಟವಾಗುತ್ತೆ. ಮಕ್ಕಳಿಗೆ ಈ ರಾಗಿ ಅಂಬಲಿ ನೀಡುವುದು ಅವರಲ್ಲಿ ಜೀರ್ಣಕ್ರಿಯೆ ದೇಹಕ್ಕೆ ಬಹಳ ಪ್ರಯೋಜನ ನೀಡಲಿದೆ. ಹಾಗೆ ನಾವಿಂದು ಜೋಳದಿಂದ ಮಾಡುವಂತಹ ರುಚಿ ರುಚಿಯಾದ ಅಂಬಲಿ ಮಾಡುವ ಕುರಿತು ತಿಳಿದುಕೊಳ್ಳೋಣ.

ಹಾಗಾದ್ರೆ ರುಚಿ ರುಚಿಯ ಈ ಜೋಳದ ಅಂಬಲಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. 

ಜೋಳದಿಂದ ಅಂಬಲಿ ಮಾಡಲು ಬೇಕಾಗುವ ವಸ್ತುಗಳು: 

ಜೋಳದ ಹಿಟ್ಟು, ಮೊಸರು, ಶುಂಠಿ, ಕೊತ್ತಂಬರಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಉಪ್ಪು, ಜೀರಿಗೆ. 

ಜೋಳದಿಂದ ಅಂಬಲಿ ಮಾಡುವ ಸುಲಭದ ವಿಧಾನವೇನು? 

ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 3 ಕಪ್ ನೀರು ಹಾಕಿಕೊಂಡು ಬಿಸಿಯಾಗಲು ಬಿಡಿ. ಈಗ ಮತ್ತೊಂದು ಪಾತ್ರೆಯಲ್ಲಿ 1 ಕಪ್ ಮೊಸರು ಹಾಕಿ ಅದಕ್ಕೆ 1 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದು ಮಜ್ಜಿಗೆ ರೀತಿ ಬರಬೇಕು. 5 ನಿಮಿಷ ಕಡೆದು ಮಜ್ಜಿಗೆ ಮಾಡಿ.

ಈಗ ಒಂದು ಬೌಲ್ನಲ್ಲಿ ಅರ್ಧ ಕಪ್ ಜೋಳದ ಹಿಟ್ಟು ಹಾಕಿಕೊಂಡು ಅದಕ್ಕೆ 1 ಕಪ್ ನೀರು ಸೇರಿಸಿ ಮಿಕ್ಸ್ ಮಾಡಬೇಕು. ಗಂಟುಗಳಿಲ್ಲದಂತೆ ಮಿಶ್ರಣ ಮಾಡಿ. ಈಗ ಒಲೆ ಮೇಲಿರುವ ಕುದಿಯುತ್ತಿರುವ ನೀರಿಗೆ ಉಪ್ಪು ಹಾಕಿ ಬಳಿಕ ಮಿಕ್ಸ್ ಮಾಡಿದ್ದ ಜೋಳದ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೈ ಬಿಡದೆ ಮಿಕ್ಸ್ ಮಾಡುತ್ತಾ ಇರಿ. 2 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಈಗ ಒಂದು ಕುಟಾಣಿಯಲ್ಲಿ ಜೀರಿಗೆ, ಶುಂಠಿ, ಬೆಳ್ಳುಳ್ಳಿಯನ್ನು ಜಜ್ಜಿ ಇಟ್ಟುಕೊಳ್ಳಿ. ಈಗ ಮೊದಲು ಮಾಡಿದ್ದ ಮಜ್ಜಿಗೆಗೆ ಮತ್ತೆ ಸ್ವಲ್ಪ ನೀರು ಹಾಕಿ. ಈಗ ಈ ಮಜ್ಜಿಗೆಯನ್ನು ಜೋಳದ ಹಿಟ್ಟಿಗೆ ಹಾಕಿ ಮತ್ತೆ ಮಿಕ್ಸ್ ಮಾಡಬೇಕು. ಅನಂತರ ಜಜ್ಜಿಕೊಂಡಿದ್ದ ಬೆಳ್ಳುಳ್ಳಿ ಜೀರಿಗೆ ಪದಾರ್ಥಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. 

ತಕ್ಷಣ ಸೇವಿಸುವುದಾದರೆ ಇದಕ್ಕೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿಕೊಳ್ಳಬಹುದು. ಹಾಗೆ ಕೊತ್ತಂಬರಿ ಸೊಪ್ಪು ಕೂಡ ಹಾಕಿಕೊಂಡು ಕುಡಿಯಬಹುದು. ಇಷ್ಟಾದರೆ ನಿಮ್ಮ ಮುಂದೆ ಈ ಜೋಳದ ಅಂಬಲಿ ಸಿದ್ದವಾಗುತ್ತೆ. ನೀವಿದನ್ನು ಒಮ್ಮೆ ಕುಡಿದು ನೋಡಿದ್ರೆ ನಿತ್ಯ ಇದನ್ನು ಸೇವಿಸುತ್ತೀರಿ. ಇದು ದೇಹಕ್ಕೆ ಹಲವು ರೀತಿಯ ಪ್ರಯೋಜನಗಳ ನೀಡಲಿದೆ. ಮಕ್ಕಳಿಗೆ ಇದನ್ನು ಮಾಡಿ ನೀಡುವುದು ಅವರ ಆರೋಗ್ಯ ಹಾಗೆ ದೇಹಕ್ಕೆ ಬಹಳ ಉತ್ತಮ ಖಾದ್ಯ ಆಗಿರಲಿದೆ.