ಬೆಳಗ್ಗೆದ್ದು ಈ ಜ್ಯೂಸ್ ಕುಡಿದ್ರೆ ಸಾಕು, ದಿನವಿಡೀ ಚುರುಕಾಗಿರ್ತೀರಾ!

ಬೆಳಗ್ಗಿನ ಜಾವ ಕಾಫಿ, ಟೀ ಅಂತ ಕುಡಿಯೋ ಬದ್ಲು, ಒಂದ್ ಚೂರು ಬದಲಾವಣೆ ಮಾಡಿ ನೋಡಿದ್ರೆ ಹೇಗಿರುತ್ತೆ? ಇವತ್ತಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಜನ ಸಾಕಷ್ಟು ಜಾಗೃತರಾಗ್ತಿದ್ದಾರೆ. ಅದರಲ್ಲೂ ಕೆಲವೊಂದು ಆಯುರ್ವೇದಿಕ್ ಪದ್ಧತಿಗಳು ಈಗ ಟ್ರೆಂಡ್ ಆಗಿ, ಎಲ್ಲರ ಮೆಚ್ಚುಗೆ ಗಳಿಸುತ್ತಿವೆ. ಅದರಲ್ಲೊಂದು, ನಮ್ಮ ಮನೆಮದ್ದುಗಳ ರಾಣಿ ನೆಲ್ಲಿಕಾಯಿ, ಕೆಂಪುರಂಗಿನ ಬೀಟ್ರೂಟ್ ಮತ್ತು ಸಿಹಿಯಾದ ಕ್ಯಾರೆಟ್ - ಈ ಮೂರರ ಅದ್ಭುತ ಕಾಂಬಿನೇಷನ್ ಜ್ಯೂಸ್!

ಕೇಳೋಕೆ ಸಿಂಪಲ್ ಅನಿಸಿದ್ರೂ, ಈ ಜ್ಯೂಸ್ ನಮ್ಮ ದೇಹಕ್ಕೆ ಮಾಡುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ಈ ಜ್ಯೂಸ್ ಕುಡಿದ್ರೆ, ನೀವೇ ಅಚ್ಚರಿಪಡೋವಷ್ಟು ಬದಲಾವಣೆಗಳನ್ನು ನಿಮ್ಮ ದೇಹದಲ್ಲಿ ಕಾಣಬಹುದು. ಅಷ್ಟಕ್ಕೂ ಈ ಜ್ಯೂಸ್ ಯಾಕೆ ಇಷ್ಟೊಂದು ಪವರ್ಫುಲ್ ಅಂತೀರಾ? ಬನ್ನಿ, ಅದರ ಬಗ್ಗೆ ಒಂದೊಂದಾಗಿ ತಿಳ್ಕೊಳೋಣ.

ಈ ಜ್ಯೂಸ್ ಕುಡಿಯುವುದರ ಪ್ರಯೋಜನಗಳೇನು?

ನೈಸರ್ಗಿಕ ಕಬ್ಬಿಣದ ಆಗರ:
"ನಾನು ಸಣ್ಣ ಆದೆಪ್ಪಾ", "ಸುಸ್ತು, ನಿಶ್ಶಕ್ತಿ ಕಾಡ್ತಿದೆ" ಅಂತ ಹೇಳ್ತೀರಲ್ಲ? ಹಾಗಿದ್ರೆ ಈ ಜ್ಯೂಸ್ ನಿಮಗೆ ವರದಾನ. ಬೀಟ್ರೂಟ್ನಲ್ಲಿರುವ ನೈಸರ್ಗಿಕ ನೈಟ್ರೇಟ್ಗಳು ಮತ್ತು ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಅತಿ ಮುಖ್ಯ. ಇದಕ್ಕೆ ಕ್ಯಾರೆಟ್ ಮತ್ತು ನೆಲ್ಲಿಕಾಯಿ ಸೇರಿದ್ರೆ, ನಮ್ಮ ರಕ್ತದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚುತ್ತೆ. ಆಮ್ಲಜನಕದ ಪೂರೈಕೆ ಸುಧಾರಿಸಿ, ಸುಸ್ತಾಗೋದೆಲ್ಲಾ ಮಾಯ. ಇನ್ಮುಂದೆ ದಿನವಿಡೀ ಎನರ್ಜಿಟಿಕ್ ಆಗಿರಬಹುದು!

ಕರುಳಿಗೆ ನೆಲ್ಲಿಕಾಯಿ ಸಾಂತ್ವನ:
ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆಗಳು ಇದ್ಯಾ? ನೆಲ್ಲಿಕಾಯಿ ನಿಮ್ಮ ಫ್ರೆಂಡ್! ಇದು ಕೇವಲ ಜೀರ್ಣಕ್ರಿಯೆಗೆ ಒಳ್ಳೆಯದು ಅನ್ನೋದಷ್ಟೇ ಅಲ್ಲ, ನಮ್ಮ ಕರುಳಿನ ಒಳಪದರವನ್ನು ಶಾಂತಗೊಳಿಸಲು ಸಹಾಯ ಮಾಡುತ್ತೆ. ಬೆಳಿಗ್ಗೆ ಎದ್ದಾಗ ಹೊಟ್ಟೆ ಉರಿ, ಎದೆ ಉರಿ ಅಂತ ಅನ್ನೋರಿಗೆ ಇದು ನಿಜಕ್ಕೂ ಬೆಸ್ಟ್ ಔಷಧಿ.

ಚರ್ಮಕ್ಕೆ ಹೊಸ ಕಾಂತಿ:
ಮೊಡವೆ, ಕಲೆಗಳು, ಡಲ್ನೆಸ್... ಈ ಜ್ಯೂಸ್ ನಿಮ್ಮ ತ್ವಚೆಗೆ ಹೊಸ ಜೀವ ನೀಡುತ್ತೆ. ಕ್ಯಾರೆಟ್ನಲ್ಲಿರೋ ಬೀಟಾ-ಕ್ಯಾರೋಟಿನ್ ನಮ್ಮ ದೇಹದಲ್ಲಿ ವಿಟಮಿನ್  ಆಗಿ ಪರಿವರ್ತನೆ ಆಗುತ್ತೆ. ಬೀಟ್ರೂಟ್ನಲ್ಲಿರೋ ಆ್ಯಂಟಿಆಕ್ಸಿಡೆಂಟ್ಗಳು ಮತ್ತು ನೆಲ್ಲಿಕಾಯಿಯ ಕಾಲಜನ್ ಹೆಚ್ಚಿಸುವ ಗುಣಗಳು ಸೇರಿಕೊಂಡ್ರೆ, ಮಂಕಾದ ಚರ್ಮಕ್ಕೆ ಹೊಸ ಹೊಳಪು ಸಿಗುತ್ತೆ. ಕಲೆಗಳು ಕಡಿಮೆಯಾಗಿ, ಮುಖ ಕಾಂತಿಯುತವಾಗುತ್ತೆ. ಗ್ಲೋಯಿಂಗ್ ಸ್ಕಿನ್ ಬೇಕಂದ್ರೆ, ಇದನ್ನ ಮಿಸ್ ಮಾಡ್ಬೇಡಿ.

ಲಿವರ್ಗೆ ಸೈಲೆಂಟ್ ಸಪೋರ್ಟ್:
ನಮ್ಮ ದೇಹದ ಡಿಟಾಕ್ಸ್ ಫ್ಯಾಕ್ಟರಿ ಅಂದ್ರೆ ಲಿವರ್. ಅದಕ್ಕೆ ಈ ಜ್ಯೂಸ್ ಒಳ್ಳೆಯ ಸ್ನೇಹಿತ. ಬೀಟ್ರೂಟ್ನಲ್ಲಿರೋ ಬೀಟೈನ್ ಅನ್ನೋ ಅಂಶ ವಿಷಕಾರಿ ಪದಾರ್ಥಗಳನ್ನು ದೇಹದಿಂದ ಹೊರಹಾಕೋಕೆ ಸಹಾಯ ಮಾಡುತ್ತೆ. ನೆಲ್ಲಿಕಾಯಿ ಲಿವರ್ನಲ್ಲಿ ಕೊಬ್ಬು ಶೇಖರಣೆ ಆಗದಂತೆ ನೋಡಿಕೊಳ್ಳುತ್ತೆ. ಹೀಗಾಗಿ, ಲಿವರ್ ಆರೋಗ್ಯವಾಗಿ ತನ್ನ ಕೆಲಸವನ್ನು ಸುಸೂತ್ರವಾಗಿ ಮಾಡೋಕೆ ಇದು ಸಹಕಾರಿ.

ಉಲ್ಲಾಸಕರ ದೇಹ ಮತ್ತು ಮನಸ್ಸು:
ಬೆಳಗ್ಗೆ ಎದ್ದಾಗ ಸುಸ್ತು, ಬ್ರೈನ್ ಫಾಗ್ (ಮಂಕು ಕವಿದಂತಾಗುವುದು) ಇದ್ಯಾ? ಕ್ಯಾರೆಟ್ ಮತ್ತು ಬೀಟ್ರೂಟ್ನಲ್ಲಿರೋ ಫೋಲೇಟ್ ಹಾಗೂ ಮೆಗ್ನೀಸಿಯಮ್ ನಮ್ಮ ಮೆದುಳಿನ ರಾಸಾಯನಿಕಗಳನ್ನು ಸಮತೋಲನದಲ್ಲಿ ಇಡುತ್ತವೆ. ಇದು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡೋಕೆ ಸಹಾಯ ಮಾಡುತ್ತೆ. ದಿನವನ್ನು ಉತ್ಸಾಹದಿಂದ ಶುರು ಮಾಡೋಕೆ ಈ ಜ್ಯೂಸ್ ಬೆಸ್ಟ್ ಚಾಯ್ಸ್!

ಕಣ್ಣಿಗೆ ಬೆಳಕು:
ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಎಷ್ಟು ಮುಖ್ಯ ಅನ್ನೋದು ನಮಗೆಲ್ಲಾ ಗೊತ್ತು. ಕ್ಯಾರೆಟ್ ವಿಟಮಿನ್ ಎ ಯ ಆಗರ. ಇದು ನಮ್ಮ ರೆಟಿನಾದ ಆರೋಗ್ಯವನ್ನು ಕಾಪಾಡುತ್ತೆ. ಇನ್ನು ನೆಲ್ಲಿಕಾಯಿಯ ಆ್ಯಂಟಿಆಕ್ಸಿಡೆಂಟ್ಗಳು ಕಣ್ಣಿನ ಪೊರೆ, ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತವೆ.

ಬ್ಲಡ್ ಶುಗರ್ ನಿಯಂತ್ರಣ:
ಡಯಾಬಿಟೀಸ್ ಸಮಸ್ಯೆ ಇರೋರಿಗೆ ಇದು ನಿಜಕ್ಕೂ ಒಳ್ಳೆಯದು. ನೆಲ್ಲಿಕಾಯಿ ಇನ್ಸುಲಿನ್ ಪ್ರತಿಕ್ರಿಯೆಯನ್ನು ನಿಯಂತ್ರಿಸುತ್ತೆ ಮತ್ತು ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತೆ. ಬೀಟ್ರೂಟ್ ಸ್ವಲ್ಪ ಸಿಹಿಯಾಗಿದ್ರೂ, ಅದ್ರಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರೋದ್ರಿಂದ, ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದ್ರೆ ಶುಗರ್ ಲೆವೆಲ್ ಹೆಚ್ಚಾಗಲ್ಲ.

ಕೂದಲಿಗೆ ಬಲ:
ಉದುರುವ ಕೂದಲು, ಡ್ರೈ ಸ್ಕ್ಯಾಲ್ಪ್ ಸಮಸ್ಯೆ ಇದ್ಯಾ? ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ನಮ್ಮ ನೆತ್ತಿಗೆ ರಕ್ತದ ಹರಿವನ್ನು ಸುಧಾರಿಸಿ, ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತೆ. ಇದರಿಂದ ಕೂದಲು ಸ್ಟ್ರಾಂಗ್ ಆಗಿ ಬೆಳೆಯಲು ಸಹಾಯ ಮಾಡುತ್ತೆ.

ಮನೆಯಲ್ಲೇ ಜ್ಯೂಸ್ ಮಾಡೋದು ಹೇಗೆ?

ಈ ಜ್ಯೂಸ್ ಮಾಡೋದು ತುಂಬಾನೇ ಸುಲಭ. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿದೆ:

ಬೇಕಾಗುವ ಸಾಮಗ್ರಿಗಳು:

1 ನೆಲ್ಲಿಕಾಯಿ

1 ಸಣ್ಣ ಬೀಟ್ರೂಟ್

2 ಮಧ್ಯಮ ಗಾತ್ರದ ಕ್ಯಾರೆಟ್

ಒಂದು ಸಣ್ಣ ತುಂಡು ಶುಂಠಿ

½ ಲಿಂಬೆ

½ ಲೋಟ ನೀರು

ಮಾಡುವ ವಿಧಾನ:

ನೆಲ್ಲಿಕಾಯಿ, ಬೀಟ್ರೂಟ್, ಕ್ಯಾರೆಟ್ ಮತ್ತು ಶುಂಠಿಯನ್ನು ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ.

ಈ ಹೆಚ್ಚಿದ ಸಾಮಗ್ರಿಗಳನ್ನು ಮಿಕ್ಸಿ ಜಾರ್ಗೆ ಹಾಕಿ.

ಅರ್ಧ ಲೋಟ ನೀರು ಹಾಕಿ, ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.

ಈಗ ರುಬ್ಬಿದ ಜ್ಯೂಸ್ ಅನ್ನು ಮಸ್ಲಿನ್ ಬಟ್ಟೆ (ತೆಳು ಬಟ್ಟೆ) ಅಥವಾ ಸ್ಟ್ರೈನರ್ (ಜರಡಿ) ಸಹಾಯದಿಂದ ಸೋಸಿಕೊಳ್ಳಿ.]

ಸೋಸಿದ ರಸಕ್ಕೆ ಅರ್ಧ ಲಿಂಬೆ ರಸ ಹಿಂಡಿಕೊಳ್ಳಿ.