ಹೊಸದಾಗಿ ಮದುವೆಯಾದಾಗ ತುಂಬಾ ನಿರೀಕ್ಷೆಗಳಿರುತ್ತದೆ. ಆ ನಿರೀಕ್ಷೆಗಳಲ್ಲಿ ಸ್ವಲ್ಪ ಆಚೆ-ಈಚೆಯಾದರೂ ಸಮಸ್ಯೆ ಶುರುವಾಗುತ್ತದೆ. ತದನಂತರ ಭಿನ್ನಾಭಿಪ್ರಾಯ, ಜಗಳ ಬರುವುದು ಇದೆಲ್ಲಾ ಇಬ್ಬರ ನಡುವೆ ದೊಡ್ಡ ಬಿರುಕು ಉಂಟು ಮಾಡುವುದು.
ವಿಚ್ಚೇದನ ಕೇಳಿ ಕೋರ್ಟ್ ಮೆಟ್ಟಿಲೇರುವ ಬಹುತೇಕ ಜೋಡಿಗಳು ಮದುವೆಯಾಗಿ ಕೆಲ ತಿಂಗಳು ಅಥವಾ ಕೆಲ ವರ್ಷಗಳಾಗಿರುತ್ತದೆ ಅಷ್ಟೇ, ಅಲ್ಲದೆ ತುಂಬಾ ವರ್ಷಗಳು ಜೊತೆಗೆ ಬಾಳಿ ನಂತರ ವಿಚ್ಛೇದನ ಪಡೆಯುವವರು ನೀಡುವಂಥ ಯಾವ ಸ್ಟ್ರಾಂಗ್ ರೀಸನ್ ಕೂಡ ಇರುವುದಿಲ್ಲ, ಚಿಕ್ಕ-ಪುಟ್ಟ ವಿಷಯಕ್ಕೆಲ್ಲಾ ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರುತ್ತಾರೆ.
ಹಾಗಾಗಿ ಹೊಸದಾಗಿ ಮದುವೆಯಾದವರು ಈ ಅಂಶಗಳ ಗಮನ ನೀಡಿದರೆ ಸಂಬಂಧವನ್ನು ಸುಂದರವಾಗಿಸಬಹುದು:
ಒಬ್ಬರ ನಡುವೆ ಉತ್ತಮ ಸಂವಹನವಿರಬೇಕು:
ಒಂದು ಸಂಬಂಧದಲ್ಲಿ ಪ್ರಮುಖವಾಗಿ ಬೇಕಾಗಿರುವುದು ಸಂವಹನ, ಗಂಡ-ಹೆಂಡತಿ ನಡುವೆ ಉತ್ತಮ ಸಂವಹನವಿರಬೇಕು, ಯಾವುದೇ ವಿಷಯದಲ್ಲಿ ಮುಚ್ಚುಮರೆ ಇರಬಾರದು. ಪ್ರತಿದಿನ ಎಷ್ಟೇ ಬ್ಯುಸಿ ಇದ್ದರೂ ಇಬ್ಬರು ಕೂತು ಮಾತನಾಡುವುದು ಒಳ್ಳೆಯದು.
ಒಬ್ಬರನ್ನೊಬ್ಬರು ಗೌರವಿಸಬೇಕು:
ಇಬ್ಬರ ಅಭಿಪ್ರಾಯಗಳು, ದೃಷ್ಟಿಕೋನಗಳು ಬೇರೆ-ಬೇರೆಯಾಗಿರುತ್ತದೆ, ಅದನ್ನು ಗೌರವಿಸಲು ಕಲಿಯಬೇಕು, ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಬ್ಬರ ನಡುವೆ ಒಂದೊಳ್ಳೆಯ ಸ್ನೇಹವಿರಬೇಕು: ಗಂಡ-ಹೆಂಡತಿ ಬರಿ ಪ್ರೇಮಿಗಳಾಗಿ ಮಾತ್ರವಲ್ಲ, ಒಳ್ಳೆಯ ಸ್ನೇಹಿತರಾಗಿರಬೇಕು, ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲಬೇಕು.
ವಾಸ್ತವದಲ್ಲಿರಿ:
ತುಂಬಾ ಭ್ರಮೆಯಲ್ಲಿ ಬದುಕಬಾರದು, ನಿಮ್ಮ ಸ್ನೇಹಿತರು ಎಲ್ಲೋ ಹನಿಮೂನ್ ಟ್ರಿಪ್ ಹೋದರು ಅಂತ ಅದು ನಿಮ್ಮ ಬಜೆಟ್ ಮೀರಿದ ಪ್ಲ್ಯಾನ್ ಮಾಡುವುದು, ಬರ್ತ್ಡೇ, ಪಾರ್ಟಿ ಎಲ್ಲವನ್ನೂ ಇತರರು ಮಾಡಿದಂತೆ ಫ್ಯಾಂಟಸಿಯಾಗಿ ಮಾಡಬೇಕೆಂದು ಬಯಸಿ ಈ ಕಾರಣ ಸಂಗಾತಿ ಜೊತೆ ಮುನಿಸಿಕೊಳ್ಳುವುದು ಎಲ್ಲಾ ಮಾಡಬಾರದು, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು, ಆವಾಗ ಕುಟುಂಬ ಬದುಕು ಚೆನ್ನಾಗಿರಲಿದೆ.
ಸಂಗಾತಿಯ ಮಾತುಗಳನ್ನು ಕೇಳಿಸಿಕೊಳ್ಳಿ:
ಈ ಗುಣ ಸಂಬಂಧದಲ್ಲಿ ತುಂಬಾನೇ ಮುಖ್ಯ, ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕು, ಆವಾಗ ಅವರು ಯಾವುದೇ ವಿಷಯವಿರಲಿ ಮನಸ್ಸು ಬಿಚ್ಚಿ ಮಾತನಾಡುವುದನ್ನು ಕಲಿಯುತ್ತಾರೆ.
ನೀವು ನೀವಾಗಿರಿ, ಬದಲಾಗಬೇಡಿ:
ಅವರಿಗೋಸ್ಕರ ಬದಲಾಗುತ್ತೇನೆ ಎಂದು ಹೋದಾಗ ನಿಮ್ಮದಲ್ಲದ ಗುಣದಿಂದಾಗಿ ನಿಮಗೆ ಉಸಿರುಕಟ್ಟಿದಂತಾಗುವುದು, ನಿಮ್ಮ ಸ್ವಾತಂತ್ರ್ಯ ಕಿತ್ತುಕೊಂಡಂತೆ ಆಗುವುದು, ಹಾಗಾಗಿ ಅವರಿಗಾಗಿ ಬದುಲಾಗಬೇಡಿ, ನೀವು ನೀವಾಗಿಯೇ ಇರಿ.
ತಾಳ್ಮೆ ಮುಖ್ಯ:
ಒಂದು ಸಂಬಂಧ ಗಟ್ಟಿಯಾಗಲು ಅದಕ್ಕೆ ಸಮಯ ಹಿಡಿಯುತ್ತದೆ, ಹಾಗಾಗಿ ಚಿಕ್ಕ ಪುಟ್ಟ ಮುನಿಸು, ಜಗಳ ಬಂದಾಗ ನೀನು ಬೇಡ್ವೆ ಬೇಡ ಎಂಬ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಸಂಬಂಧದಲ್ಲಿ ತಾಳ್ಮೆ ತುಂಬಾ ಮುಖ್ಯ.
