ಪಾಲಕರಿಗೆ ತಮ್ಮ ಪುಟ್ಟ ಮಕ್ಕಳು ವೇಗವಾಗಿ ಉಸಿರಾಡುವುದು ಅಚ್ಚರಿ ತರಿಸಬಹುದು. ನಿಮ್ಮ ಮನೆಯಲ್ಲಿ ಈಗತಾನೇ ಹುಟ್ಟಿದ ಪುಟ್ಟ ಮಗುವಿದ್ದರೆ ಇದರ ಉಸಿರಾಟದ ಗತಿಯನ್ನು ಕೊಂಚ ಗಮನಿಸಿ. ಇದು ಪಾಲಕರಿಗೆ ಮಾತ್ರವಲ್ಲ ವೈದ್ಯರೂ ಗಮನಿಸಬೇಕಾದ ಅಂಶವಾಗಿದ್ದು ಕೆಲವು ದಿನಗಳವರೆಗಾದರೂ ಮಗುವಿನ ಉಸಿರಾಟವನ್ನು ಗಮನಿಸಬೇಕಾಗುತ್ತದೆ.
ಸಾಮಾನ್ಯವಾಗಿ ಎಲ್ಲಾ ಪಾಲಕರ ಪ್ರಶ್ನೆಯೂ ಒಂದೇ ಆಗಿರುತ್ತದೆ: ಪುಟ್ಟ ಮಕ್ಕಳೇಕೆ ಇಷ್ಟು ಜೋರಾಗಿ ಉಸಿರಾಡಬೇಕು? ವಾಸ್ತವವಾಗಿ ಪುಟ್ಟಮಕ್ಕಳ ಉಸಿರಾಟದ ಗತಿ ಹಾಗೂ ಪ್ರಮಾಣ ಇತರ ಮಕ್ಕಳ ಅಥವಾ ಹಿರಿಯರ ಉಸಿರಾಟದ ಗತಿಗಿಂತಲೂ ಭಿನ್ನವಾಗಿರುವುದೇ ಇದಕ್ಕೆ ಕಾರಣ.
ಹುಟ್ಟಿದ ಮಕ್ಕಳ ಉಸಿರಾಟದ ಗತಿ ಇತರರಿಗಿಂತ ಹೆಚ್ಚೇ ಇರುತ್ತದೆ. ಅಲ್ಲದೇ ಇದು ಕೊಂಚ ಏರುಪೇರಾಗುತ್ತಾ ಪಾಲಕರ ಆತಂಕವನ್ನು ಹೆಚ್ಚಿಸುತ್ತದೆ. ಆದರೆ ಇದು ಸಾಮಾನ್ಯವಾಗಿದ್ದು ಆತಂಕಕ್ಕೆ ಕಾರಣವಿಲ್ಲ. ಹಿರಿಯರ ಪ್ರತಿ ಉಸಿರೂ ಕೆಲವು ಸೆಕೆಂಡುಗಳಷ್ಟು ದೀರ್ಘವಾಗಿದ್ದರೆ ಮಕ್ಕಳು ಸರಿಸುಮಾರು ಸೆಕೆಂಡಿಗೊಂದು ಉಸಿರು ಎಳೆದುಕೊಳ್ಳುತ್ತವೆ. ಇದಕ್ಕೆ ಕಾರಣವೂ ಇದೆ. ಹಿರಿಯರ ಎದೆಗೂಡು ವಿಶಾಲವಾಗಿದ್ದು ಹೆಚ್ಚಿನ ಗಾಳಿಯನ್ನು ಹೀರಿಕೊಳ್ಳಲು ಸ್ಥಳಾವಕಾಶವಿದೆ.
ಆದರೆ ಪುಟ್ಟ ಮಗುವಿನ ಎದೆಯಲ್ಲಿರುವ ಪುಟ್ಟ ಶ್ವಾಸಕೋಶಕ್ಕೆ ಅಷ್ಟು ಪ್ರಮಾಣದ ಗಾಳಿಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮಕ್ಕಳ ಉಸಿರಾಟದ ಗತಿ ಕೊಂಚ ಹೆಚ್ಚಾಗಿರುತ್ತದೆ. ಮಗು ಬೆಳೆಯುತ್ತಾ ಹೋದಂತೆ ನಿಧಾನವಾಗಿ ಶ್ವಾಸಕೋಶವೂ ಬೆಳೆದು ಹೆಚ್ಚಿನ ಕ್ಷಮತೆ ಪಡೆದುಕೊಳ್ಳುವ ಮೂಲಕ ಉಸಿರಾಟದ ಗತಿ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ.
ಮಕ್ಕಳಿಗೆ ಉಸಿರಾಟದ ಗತಿ ಯಾವುದು ಸಾಮಾನ್ಯ? ಹುಟ್ಟಿದಂದಿನಿಂದ ಆರು ತಿಂಗಳವರೆಗಿನ ಮಕ್ಕಳಿಗೆ ಸುಮಾರು 30-60 bpm (ಬೀಟ್ಸ್ ಪರ್ ಮಿನಿಟ್) ಅಥವಾ ಪ್ರತಿ ನಿಮಿಷಕ್ಕೆ ಬಡಿತಗಳು. ಆರು ತಿಂಗಳ ಬಳಿಕ ಈ ಗತಿ 24-40 bpm ಗೆ ಇಳಿಯುತ್ತದೆ. ಒಂದರಿಂದ ಐದು ವರ್ಷದವರೆಗಿನ ಮಕ್ಕಳ ಉಸಿರಾಟದ ಗತಿ 20-30 bpm ಇರುತ್ತದೆ. ಆರು ವರ್ಷದ ಮಕ್ಕಳು 12-20bpm ಗತಿಯಲ್ಲಿ ಉಸಿರಾಡುತ್ತಾರೆ. ಹದಿಹರೆಯದ ಮಕ್ಕಳು ಸುಮಾರು 12-16 bpm ಗತಿಯಲ್ಲಿ ಉಸಿರಾಡುತ್ತಾರೆ.
ಪುಟ್ಟ ಮಗುವಿನ ಉಸಿರಾಟದ ಗತಿಯನ್ನು ಅಳೆಯುವುದು ಹೇಗೆ? ಈ ಪ್ರಶ್ನೆಯನ್ನು ನಿಮ್ಮ ಕುಟುಂಬ ವೈದ್ಯರಲ್ಲಿಯೂ ಕೇಳಬಹುದು. ವೈದ್ಯರು ನಿಖರವಾದ ವಿವರಗಳನ್ನು ನೀಡುತ್ತಾರೆ. ಒಂದು ವೇಳೆ ನೀವೇ ಅಳೆಯಬಹುದು. ಇದಕ್ಕಾಗಿ ಮಗುವಿನ ಒಂದು ಉಸಿರಿನ ಉಶ್ವಾಸದಿಂದ ತೊಡಗಿ ಮೂವತ್ತು ಸೆಕೆಂಡುಗಳ ಕಾಲ ಎಷ್ಟು ಉಸಿರು ಪಡೆದುಕೊಂಡಿತು ಎಂದು ಅಳೆಯಿರಿ. ಇದನ್ನು ಎರಡರಿಂದ ಗುಣಿಸಿದಾಗ ಬಿಪಿಎಂ ಅಳತೆ ಸಿಗುತ್ತದೆ. ಕೆಲವೊಮ್ಮೆ ಮಗುವಿನ ಉಸಿರಾಟದ ವೇಗ ಕೊಂಚ ಹೆಚ್ಚು ಕಡಿಮೆಯಾಗುತ್ತಿರಬಹುದು. ಈ ಸಮಯದಲ್ಲಿ ಮಾಡಿದ ಅಳತೆ ಸರಿಯಾಗಿ ಸಿಗುವುದಿಲ್ಲ. ಹೀಗಿದ್ದರೆ ಮಗುವನ್ನು ವೈದ್ಯರ ಬಳಿ ತಪ್ಪದೇ ಕರೆದೊಯ್ಯಬೇಕು.
ಅಳೆಯುವ ಇನ್ನೊಂದು ವಿಧಾನ ಮಗುವಿನ ಉಸಿರಾಟವನ್ನು ಕೊಂಚ ಸೂಕ್ಷ್ಮವಾಗಿ ಗಮನಿಸಿ. ಎದೆ ಮೇಲೆ ಕೆಳಗೆ ಹೋಗುವುದನ್ನು ಸ್ಪಷ್ಟವಾಗಿ ಗಮನಿಸತೊಡಗಿದ ಬಳಿಕ ಒಂದು ಉಸಿರಿನಲ್ಲಿ ಎದೆ ಮೇಲೆ ಇದ್ದಾಗಿನ ಕ್ಷಣದಿಂದ ಪ್ರಾರಂಭಿಸಿ ಒಂದು ನಿಮಿಷದ ಅವಧಿಯಲ್ಲಿ ಎಷ್ಟು ಬಾರಿ ಎದೆ ಕೆಳಗಿಳಿಯಿತು ಎಂಬುದನ್ನು ಲೆಕ್ಕಹಾಕಿ. ಸಾಮಾನ್ಯವಾಗಿ ಕಣ್ಣಿನಲ್ಲಿ ಈ ಲೆಕ್ಕವನ್ನು ಮಾಡಲು ಸೂಕ್ಷ್ಮವಾಗಿ ಗಮನಿಸುವ ಚಾಕಚಕ್ಯತೆಯ ಅಗತ್ಯವಿದೆ. ಬದಲಿಗೆ ಮಗುವಿನ ಎದೆಯ ಮೇಲೆ ಒಂದು ಬೆರಳನ್ನು ಭಾರವಿಲ್ಲದಂತೆ ಇರಿಸಿ ಬೆರಳು ಮೇಲೆ ಬಂದಾಗ ಲೆಕ್ಕಹಾಕಿ ಉಸಿರಾಟದ ಗತಿಯನ್ನು ಅಳೆಯಬಹುದು.
ಯಾವಾಗ ಅಳೆಯುವುದು ಸೂಕ್ತ? ಒಂದು ವೇಳೆ ಮನೆಯಲ್ಲಿಯೇ ಹೆರಿಗೆಯಾದರೆ ಸುಮಾರು ಐದರಿಂದ ಆರು ಘಂಟೆಗಳ ಬಳಿಕ ಉಸಿರಾಟದ ಗತಿಯನ್ನು ಅಳೆಯಬೇಕು. ಆಸ್ಪತ್ರೆಯಲ್ಲಿ ಆದ ಹೆರಿಗೆಯಲ್ಲಿ ವೈದ್ಯರು ಹಾಗೂ ದಾದಿಯರು ಈ ವಿವರಗಳನ್ನು ತಪ್ಪದೇ ಗಮನಿಸಿ ತಮ್ಮ ದಾಖಲೆಗಳಲ್ಲಿ ನಮೂದಿಸುತ್ತಾರೆ. ಒಂದು ವೇಳೆ ನಿಮ್ಮ ಮಗುವಿನ ಉಸಿರಾಟದ ಬಗ್ಗೆ ಕಾಳಜಿ ಇದ್ದರೆ ವೈದ್ಯರಲ್ಲಿ ವಿಚಾರಿಸಿದರೆ ವೈದ್ಯರು ಈ ಮಾಹಿತಿಯನ್ನು ಹಾಗೂ ಸಾಮಾನ್ಯಗತಿಯ ಬಗ್ಗೆ ವಿವರಗಳನ್ನು ನೀಡುತ್ತಾರೆ. ಸಾಮಾನ್ಯವಾಗಿ ಗರ್ಭಕೋಶದ ಜೀವನನ್ನು ಅನುಭವಿಸಿದ ಮಗು ಹೊರಜಗತ್ತಿಗೆ ಬಂದ ಬಳಿಕ ಈ ಪರಿಸರಕ್ಕೆ ಹೊಂದಿಕೊಳ್ಳಲು ಕೊಂಚ ಸಮಯಾವಕಾಶ ಬೇಕಾಗುತ್ತದೆ.
